ದೂರದರ್ಶನಕ್ಕೆ ಮತ್ತೊಂದು ವಾಹಿನಿ ಸೇರ್ಪಡೆ: ಆಯುಷ್ಮಾನ್ ಭಾರತ ಹೊಸ ಚಾನಲ್ ಶೀಘ್ರ ಆರಂಭ

ನವದೆಹಲಿ:ಜು-೨೩: ಆಯುಷ್ಮಾನ್ ಭಾರತದ ಅಡಿಯಲ್ಲಿ ಹೊಸದೊಂದು ವಾಹಿನಿ ಆರಂಭಿಸಲು ನೀತಿ ಆಯೋಗ ಸಿದ್ಧತೆ ನಡೆಸುತ್ತಿದ್ದು, ಹೊಸ ಆರೋಗ್ಯವಾಹಿನಿಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಈಗಾಗಲೇ ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ದೇಶದ ಸುಮಾರು 100 ಮಿಲಿಯನ್ ಬಡ ಕುಟುಂಬಗಳಿಗೆ 5 ಲಕ್ಷ ರೂ.ಮೌಲ್ಯದ ಆರೋಗ್ಯ ವಿಮೆ ಸವಲತ್ತು ನೀಡಲಾಗಿದ್ದು, ಇದಕ್ಕೆ ಪೂರಕ ಎಂಬಂತೆ ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಆರೋಗ್ಯ ವಾಹಿನಿಗೆ ಚಾಲನೆ ನೀಡಲು ಆಯೋಗ ಮುಂದಾಗಿದೆ. ಈಗಾಗಲೇ ಈ ಕುರಿತ ಕಾರ್ಯಗಳಿಗೆ ಆಯೋಗ ಚಾಲನೆ ನೀಡಿದ್ದು, ಡಿಡಿ ಕಿಸಾನ್ ಬಳಿಕ ದೂರದರ್ಶನಕ್ಕೆ ಮತ್ತೊಂದು ವಾಹಿನಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಇನ್ನು ಆರೋಗ್ಯ ವಾಹಿನಿ ಆರಂಭದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದಾಖಲೆಯೊಂದಕ್ಕೆ ಸಾಕ್ಷಿಯಾಗಲಿದ್ದು, ದೂರದರ್ಶನದ 2 ವಾಹಿನಿಗಳಿಗೆ ಚಾಲನೆ ನೀಡಿದ ಮೊದಲ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಪಾತ್ರರಾಗಲಿದ್ದಾರೆ.

ಈ ಹಿಂದೆ 2015ರಲ್ಲಿ ಎನ್ ಡಿಎ ಸರ್ಕಾರ ಡಿಡಿ ಕಿಸಾನ್ ಎಂಬ ರೈತರ ಕುರಿತ ಕಾರ್ಯಕ್ರಮಗಳನ್ನು ಬಿತ್ತರಿಸುವ ವಾಹಿನಿಗೆ ಚಾಲನೆ ನೀಡಿತ್ತು. ಇದೀಗ ಆರೋಗ್ಯದ ಕುರಿತು ಕಾರ್ಯಕ್ರಮಗಳನ್ನು ಬಿತ್ತರಿಸುವ ಆರೋಗ್ಯ ವಾಹಿನಿಗೆ ಶೀಘ್ರ ಚಾಲನೆ ದೊರೆಯುವ ಸಾಧ್ಯತೆ ಇದೆ.

ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ಸ್ವಚ್ಛ ಭಾರತ, ಮಿಷನ್ ಇಂದ್ರ ಧನುಷ್, ಆಯುಷ್ಮಾನ್ ಭಾರತ , ಯೋಗ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ದೂರದರ್ಶನದ ಹಿರಿಯ ಅಧಿಕಾರಿಯೊಬ್ಬರು, ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಮುಖ್ಯತೆ ನೀಡಿದ್ದು, ಇದೇ ಕಾರಣಕ್ಕೆ ಆರೋಗ್ಯಕ್ಕೆ ಸಂಬಂಧಿಸಿದ ವಾಹಿನಿಗೆ ಚಾಲನೆನೀಡಲು ಮುಂದಾಗಿದೆ. ಇನ್ನು ನೂತನ ವಾಹಿನಿಯಲ್ಲಿ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, ದೇಶದ ಖ್ಯಾತ ವೈದ್ಯಕೀಯ ಸಂಸ್ಥೆಗಳು ಈ ವಾಹಿನಿಗಾಗಿ ಮಾಹಿತಿಗಳನ್ನು ನೀಡಲಿವೆ ಎಂದು ಹೇಳಿದ್ದಾರೆ.

NITI Aayog, NDA Governmnet, Health Channel, Ayushman Bharat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ