ನವದೆಹಲಿ:ಜು-22: ಕಣಿವೆ ರಾಜ್ಯ ಜಮ್ಮು -ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡ ನಂತರ ಉಗ್ರರ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿವೆ ಆದರೆ, ಕಲ್ಲು ತೂರಾಟದಂತಹ ಘಟನೆಗಳು ಹೆಚ್ಚಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಮಾಹಿತಿ ತಿಳಿಸಿದೆ.
ಜೂನ್ 16 ರಿಂದ ಜುಲೈ 15ರವರೆಗೂ ಉಗ್ರರ ದಾಳಿ ಪ್ರಕರಣಗಳಲ್ಲಿ ಕಡಿಮೆಯಾಗಿವೆ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ರಂಜಾನ್ ತಿಂಗಳ ವೇಳೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ಅಮಾನತ್ತಿನಲ್ಲಿಡಲಾಗಿತ್ತು.
ಒಂದು ತಿಂಗಳ ಹಿಂದೆ 47 ಕ್ಕೂ ಹೆಚ್ಚು ಉಗ್ರರ ದಾಳಿ ಪ್ರಕರಣಗಳು ನಡೆದಿವೆ. ಆದರೆ, ಕಾರ್ಯಾಚರಣೆ ಅಮಾನತ್ತಿನಲ್ಲಿಟ್ಟ ತಿಂಗಳಲ್ಲಿ 80 ಉಗ್ರ ಘಟನೆಗಳು ನಡೆದಿದ್ದವು. ಇದರಲ್ಲಿ ಅರ್ಧ ಗ್ರೇನೆಡ್ ಎಸೆತ ಹಾಗೂ ಗುಂಡಿನ ದಾಳಿಯೇ ಆಗಿದ್ದವು.
ರಾಜ್ಯಪಾಲರ ಆಡಳಿತಾವಧಿಯಲ್ಲಿ 14 ಉಗ್ರರು ಹತ್ಯೆಯಾಗಿದ್ದು, ಐವರು ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಆದರೆ, ಕಾರ್ಯಾಚರಣೆ ಅಮಾನತ್ತಿನಲ್ಲಿಟ್ಟ ವೇಳೆಯಲ್ಲಿ 24 ಉಗ್ರರು ಹತ್ಯೆಯಾಗಿದ್ದರೆ, 10 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು ಎನ್ನಲಾಗಿದೆ.
ರಾಜ್ಯಪಾಲರ ಒಂದು ತಿಂಗಳ ಆಡಳಿತಾವಧಿಯಲ್ಲಿ 95 ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿವೆ. ಕದನ ವಿರಾಮದ ಒಂದು ತಿಂಗಳ ಅವಧಿಯಲ್ಲಿ 90 ಘಟನೆಗಳು ವರದಿಯಾಗಿದ್ದವು.
ರಾಜ್ಯಪಾಲರ ಆಡಳಿತಾವಧಿಯಲ್ಲಿ ಭದ್ರತಾ ಪಡೆಗಳು ಕೈಗೊಂಡ ಕಾರ್ಯಾಚರಣೆ ವೇಳೆಯಲ್ಲಿ ಏಳಕ್ಕೂ ಹೆಚ್ಚು ನಾಗರೀಕರು ಮೃತಪಟ್ಟಿದ್ದಾರೆ. ಆದರೆ, ಕಾರ್ಯಾಚರಣೆ ರದ್ದುಗೊಂಡಿದ್ದ ವೇಳೆಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು ಎಂದು ಕೇಂದ್ರ ಗೃಹ ಸಚಿವಾಲಯದಿಂದ ಬಿಡುಗಡೆಯಾಗಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ
Terror Violence Has Dipped In Jammu And Kashmir: Home Ministry Data