ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ದೀಪಾಲಂಕಾರ

OLYMPUS DIGITAL CAMERA

ಮೈಸೂರು, ಜು.19- ಮೊದಲ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು, ಹೂವು ಹಾಗೂ ದೀಪಾಲಂಕಾರ ಕಾರ್ಯ ಭರದಿಂದ ಸಾಗಿದೆ.
ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಬೆಟ್ಟಕ್ಕೆ ತೆರಳುವವರು ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ಉಚಿತ ಬಸ್‍ಗಳ ಮೂಲಕ ಬೆಟ್ಟಕ್ಕೆ ಹೋಗಬೇಕೆಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮನವಿ ಮಾಡಿದ್ದಾರೆ.
ಇಂದು ಬೆಳಗಿನ ಜಾವ ಎರಡು ಗಂಟೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆಷಾಢ ಶುಕ್ರವಾರದ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಕ್ತಾದಿಗಳು ಸರತಿ ಸಾಲಿನಲ್ಲಿ ತೆರಳಲು ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ. ವಿಶೇಷ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳು, ಚಾಮುಂಡಿ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುವವರ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವರಿಗೆ ವಿಶೇಷ ಪಾಸ್ ನೀಡಲಾಗಿದೆ. ಈ ವಾಹನಗಳು ಕೂಡಾ ಮಹಿಷಾಶುರ ಪ್ರತಿಮೆವರೆಗೆ ಮಾತ್ರ ಹೋಗಬಹುದು. ದೇವಾಲಯದ ಬಳಿ ಹೋಗಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೂರು ಗಂಟೆಗೆ ದೇವಿಗೆ ಪೂಜೆ:
ಆಷಾಢ ಶುಕ್ರವಾರ ಪ್ರಯುಕ್ತ ಮುಂಜಾನೆ ಮೂರು ಗಂಟೆಗೆ ದೇವಿಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿ ನಂತರ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ. ಆ ನಂತರ ಮಂಗಳಾರತಿ ಮಾಡಲಾಗುತ್ತದೆ.
ನಾಲ್ಕು ಗಂಟೆಯಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ