ಶ್ರೀನಗರ, ಜು.17- ಜಮ್ಮು -ಕಾಶ್ಮೀರದಲ್ಲಿ ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿರುವ ಯಾತ್ರಿಕರ ಮೇಲೆ ದೊಡ್ಡ ಮಟ್ಟದ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನದ ನಿಷೇಧಿತ ಲಷ್ಕರ್ -ಎ-ತೊಯ್ಬಾ (ಎಲ್ಇಟಿ) ಸಂಚು ರೂಪಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯ ಕಾಶ್ಮೀರ ಹಾಗೂ ಅಮರನಾಥ ಯಾತ್ರೆ ಮಾರ್ಗದುದ್ದಕ್ಕೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕಳೆದ ವರ್ಷ ಉಗ್ರಗಾಮಿಗಳು ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ ದಾಳಿ ನಡೆಸಿ 8 ಭಕ್ತರನ್ನು ಕೊಂದು ಹಲವರನ್ನು ಗಾಯಗೊಳಿಸಿದ್ದರು. ಈ ವರ್ಷವೂ ಸಹ ಅಮರನಾಥ ಯಾತ್ರಿಕರ ಮೇಲೆ ದೊಡ್ಡ ಮಟ್ಟದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಅಮರನಾಥ ಯಾತ್ರಿಕರು ಸಾಗುವ ಮಾರ್ಗದ ಮೇಲೆ ಭಯೋತ್ಪಾದಕರ ವಕ್ರ ದೃಷ್ಟಿ ಬಿದ್ದಿದ್ದು , ಬಿಗಿ ಭದ್ರತೆಯ ನಡುವೆಯೂ ಸಮಯ ಸಾಧಿಸಿ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿನ ನಿಗಾ ಇಡುವಂತೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ವರದಿಯನ್ನಾಧರಿಸಿ ಅಮರನಾಥ ಯಾತ್ರಿಕ ರಿಗೆ ಮತ್ತಷ್ಟು ಬಿಗಿ ಭದ್ರತೆ ಒದಗಿಸಲಾಗಿದೆ.