ಭೂಗಳ್ಳರಿಗೆ ಬ್ರೇಕ್ ಹಾಕಲು ಭೂ ಇಲಾಖೆ ಕ್ರಮ

 

ಬೆಂಗಳೂರು,ಜು.14-ರಾಜ್ಯ ರಾಜಧಾನಿಯಲ್ಲಿ ಕೆರೆಗಳನ್ನು ಮಂಗಮಾಯ ಮಾಡಿ ಬೃಹದಾಕಾರದ ಕಟ್ಟಡಗಳನ್ನು ನಿರ್ಮಿಸಿಕೊಂಡು, ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಹಾಗೂ ಪಾಲಿಕೆಯ ಆಸ್ತಿಯನ್ನು ಗುಳಂ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟುಮಾಡಿರುವ ಭೂಗಳ್ಳರಿಗೆ ಬ್ರೇಕ್ ಹಾಕಲು ಕರ್ನಾಟಕ ಭೂ ಇಲಾಖೆ ಮುಂದಾಗಿದೆ.
ಭೂ ಇಲಾಖೆಯ ಕಾನೂನಿನ ಪ್ರಕಾರ ಹಳ್ಳಿ ಹಾಗೂ ನಗರ ಪ್ರದೇಶದಲ್ಲಿರುವ ಆಸ್ತಿಯನ್ನು ಪತ್ತೆ ಮಾಡಿ ಮಾಹಿತಿ ನೀಡಬೇಕು ಎಂಬ ಕಾನೂನಿದೆ. ಅದರ ಹಿನ್ನೆಲೆಯಲ್ಲಿ ಹಾಗೂ ಕ್ಯಾಬಿನೆಟ್‍ನ ನಿರ್ಧಾರದ ಪ್ರಕಾರ ಬೆಂಗಳೂರಿನಲ್ಲಿ ಆಸ್ತಿಗಳನ್ನು ಪತ್ತೆ ಮಾಡಬೇಕು ಎಂಬ ಆದೇಶ ಬಂದಿದ್ದು, ಕರ್ನಾಟಕ ಭೂ ಕಂದಾಯ ಇಲಾಖೆಯು ನಗರದಲ್ಲಿ ಆಸ್ತಿಯ ಪತ್ತೆಗೆ ಮುಂದಾಗಿದೆ.
ಜಯನಗರದ 4ನೇ ಹಂತದಲ್ಲಿ ಸರ್ವೆ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಡೆಹ್ರಾಡೂನ್‍ನಿಂದ ಬಂದಿರುವ ಡ್ರೋಣ್ ಕ್ಯಾಮರಾ ತಂಡದೊಂದಿಗೆ ಮೂರು ದಿನಗಳ ಕಾಲ ಈ ಸರ್ವೆ ಕಾರ್ಯ ನಡೆಯಲಿದೆ. ವಿಶೇಷವಾಗಿ ರಾಜ್ಯದಲ್ಲಿರುವ ಆಸ್ತಿಯನ್ನು ಸರ್ವೆ ಮಾಡಲು ಕನಿಷ್ಠ ಅಂದರೂ ಹತ್ತು ವರ್ಷಗಳು ಬೇಕಾಗುತ್ತಿತ್ತು. ಈ ಡ್ರೋಣ್ ಕ್ಯಾಮರಾದ ಸರ್ವೆ ಸಾಬೀತಾದರೆ ಒಂದೂವರೆ ವರ್ಷದಲ್ಲಿ ಸರ್ವೆ ಕಾರ್ಯ ಮುಗಿಯಲಿದೆ ಎನ್ನುತ್ತಾರೆ ಕರ್ನಾಟಕ ಕಂದಾಯ ಇಲಾಖೆಯ ಸರ್ವೆ ಕಮಿಷನರ್ ಮುನೀಶ್ ಮೊದ್ಗಿಲ್.
ಡ್ರೋಣ್ ಸರ್ವೆ ಟೆಕ್ನಾಲಜಿಯನ್ನು ಭೂ ಮಾಪನ ಇಲಾಖೆ ಪ್ರಾಯೋಗಿಕವಾಗಿ ತರಿಸಿಕೊಂಡಿದ್ದು, ನಗರದ ಪ್ರತಿ ಇಂಚಿಂಚು ಮಾಹಿತಿಯನ್ನು ಈ ತಂಡ ನೀಡಲಿದೆ.
ಭಾರತ ಸರ್ಕಾರದ ಸರ್ವೆ ಆಫ್ ಇಂಡಿಯಾ ಈ ಟೆಕ್ನಾಲಜಿಯನ್ನು ನೀಡಿದ್ದು,ಡೆಹ್ರಾಡೂನ್‍ನಿಂದ ಮೂರು ತಂತ್ರಜ್ಞರು ಹಾಗೂ ಪ್ರಾಪರ್ಟಿ ಡ್ರೋಣ್ ಕ್ಯಾಮರಾವನ್ನು ತರಿಸಿಕೊಳ್ಳಲಾಗಿದೆ.
ಒಂದು ವೇಳೆ ಈ ಸರ್ವೆ ಡ್ರೋಣ್ ಯಶಸ್ವಿಯಾದರೆ ರಾಜ್ಯ ರಾಜಧಾನಿಯ ಅಕ್ರಮ ತೆರಿಗೆದಾರ ಹಾಗೂ ಭೂಗಳ್ಳರ ನಿದ್ದೆಗೆಡಿಸೋದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ ಕಂದಾಯ ಇಲಾಖೆಯ ಅಧಿಕಾರಿಗಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ