ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಕ್ಕೆ ವಿರೋಧ

 

ಬೆಂಗಳೂರು, ಜು.12- ರಾಜ್ಯದ ರೈತರ ಸಾಲ ಮನ್ನಾ ಮಾಡಲು ಪರ್ಯಾಯ ಆರ್ಥಿಕ ಮೂಲಗಳನ್ನು ಹುಡುಕದೆ ಪೆಟ್ರೋಲ್, ಡೀಸೆಲ್, ವಿದ್ಯುತ್ ಹಾಗೂ ಮದ್ಯದ ಮೇಲಿನ ಬೆಲೆಯನ್ನು ಏರಿಕೆ ಮಾಡಿದ ಪರಿಣಾಮ ಸಾಮಾನ್ಯ ಜನ ರೈತರನ್ನು ಬೈಯ್ಯುತ್ತಾ ಕೂರುವ ಆಘಾತಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಮಾಧುಸ್ವಾಮಿ ವಿಧಾನಸಭೆಯಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಮುಖ ತೋರಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಹೊರೆ ಹೇರುವ ಸರ್ಕಾರದ ನಿರ್ಧಾರದಿಂದ ರೈತರು ಮುಜುಗರಕ್ಕೊಳಗಾಗುವಂತಾಗಿದೆ ಎಂದು ವಿಷಾದಿಸಿದರು.
ಈ ಹಿಂದೆ ಸಿದ್ಧರಾಮಯ್ಯ ಅವರು ರೈತರ ಸಾಲ ಮನ್ನಾ ಯೋಜನೆಯನ್ನು ಪ್ರಕಟಿಸುವಾಗ ನಮಗೆ ಆರ್ಥಿಕ ಬಿಕ್ಕಟ್ಟಿದ್ದರೂ ಇಷ್ಟು ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡುತ್ತಿದ್ದೇವೆ ಎಂದು ಹೇಳಿದರು. ಆ ಮೂಲಕ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಸಿದರು.
ಆದರೆ ಈಗ ಕುಮಾರಸ್ವಾಮಿಯವರು ರೈತರ ಮೂವತ್ನಾಲ್ಕು ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಅದಕ್ಕಾಗಿ ಪರ್ಯಾಯ ಆರ್ಥಿಕ ಮೂಲಗಳನ್ನು ಹುಡುಕದೆ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹೇರುವ ಮೂಲಕ ರೈತರು ಮುಜುಗರ ಅನುಭವಿಸುವಂತೆ ಮಾಡಿದ್ದಾರೆ.
ನೀವು ಈ ಕೆಲಸ ಮಾಡಿದರೂ ರೈತರ ಸಾಲ ಮನ್ನಾ ಮಾಡಲು ಅಗತ್ಯವಾದ ಹಣ ದಕ್ಕುವುದಿಲ್ಲ. ಜತೆಗೆ ಸರ್ಕಾರ ಈಗಾಗಲೇ ಪ್ರಕಟಿಸಿರುವ ಯಾವುದಾದರೂ ಯೋಜನೆಗಳಿಗೆ ಕಡಿವಾಣ ಹಾಕಲೇಬೇಕು. ಆದರೆ ಅದು ಹೊರಗೆ ಬರದೆ ಜನಸಾಮಾನ್ಯರ ಮೇಲೆ ಹೇರಿದ ತೆರಿಗೆ ಹೊರೆ ಬಗ್ಗೆ ಮಾತ್ರ ತಿಳಿಯುವಂತಾಗಿದೆ ಎಂದು ಹೇಳಿದರು.
ಬಜೆಟ್ ವಿಷಯ ಮಾತನಾಡುವಾಗ ಇದೇ ಸಿದ್ಧರಾಮಯ್ಯ ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಿದ್ದರು. ಎಸ್.ಎಂ.ಕೃಷ್ಣ ಅವರು ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ರಾಜ್ಯದ ಮೇಲಿರುವ ಸಾಲದ ಹೊರೆ 2.86 ಲಕ್ಷ ಕೋಟಿ ರೂ.ಗಳಿಗೇರಿದೆಯಲ್ಲ, ಇದ್ಯಾವ ಆರ್ಥಿಕ ಶಿಸ್ತು ಎಂದು ಪ್ರಶ್ನೆ ಮಾಡಿದರು.
ಸಿದ್ಧರಾಮಯ್ಯ ಅವರೇ ನಲವತ್ತು ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ಈಗ ಕುಮಾರಸ್ವಾಮಿಯವರೂ ಬಂದು ಸಾಲ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗೆ ಸಾಲದ ಮೇಲೆ ಸಾಲ ಮಾಡಿ ಸರ್ಕಾರ ನಡೆಸುವುದಾದರೆ ಈ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಪ್ರಶ್ನಿಸಿದರು.
ಸರ್ಕಾರ ಎಂಬುದು ಯೋಜನಾ ವೆಚ್ಚದ ಮೇಲೆ ಹೆಚ್ಚಿನ ಹಣ ಹೂಡಬೇಕು. ಆ ಮೂಲಕ ದೂರಗಾಮಿ ನೆಲೆಯಲ್ಲಿ ನಮಗೆ ಲಾಭ ಬರಬೇಕು. ಆದರೆ ಸರ್ಕಾರ ಯೋಜನಾ ವೆಚ್ಚದ ಮೇಲೆ ಹೂಡುವ ಐವತ್ತು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣದಿಂದ ನಯಾಪೈಸೆ ಲಾಭ ವಾಪಸ್ ಬರುವುದಿಲ್ಲ ಎಂದು ಸಿಎಜಿ ವರದಿ ಹೇಳಿದೆ.
ನೀವು ಒಂದು ಯೋಜನೆ ಮಾಡುವಾಗ ಅದಕ್ಕಾಗುವ ವೆಚ್ಚ ಎಷ್ಟು? ಬೇಕಾದ ಒಟ್ಟಾರೆ ಹಣವೆಷ್ಟು? ಒದಗಿಸುವ ಹಣದ ಪ್ರಮಾಣವೆಷ್ಟು ಎಂಬುದನ್ನು ಹೇಳಬೇಕು. ಒಂದು ಯೋಜನೆಯನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಮುಗಿಸದೆ ಹೋದರೆ ಹೆಚ್ಚುವರಿ ವೆಚ್ಚಕ್ಕೆ ದಾರಿಯಾಗುತ್ತದೆ. ಸರ್ಕಾರ ರೂಪಿಸುವ ಎಲ್ಲ ಯೋಜನೆಗಳು ನಿಗದಿತ ಕಾಲಾವಧಿಯಲ್ಲಿ ಏಕೆ ಮುಗಿಯುತ್ತಿಲ್ಲ ಎಂದರು.
ಹೀಗೆ ಮುಗಿಸದ ಧೋರಣೆಯಿಂದ ರಾಜ್ಯದ ಮೇಲಿನ ಸಾಲದ ಹೊರೆ ಮಿತಿ ಮೀರಿ ಹೆಚ್ಚಳವಾಗುತ್ತಿದೆ. ಇದನ್ನು ಗಮನಿಸದೆ ಇದ್ದರೆ ರಾಜ್ಯ ಆರ್ಥಿಕವಾಗಿ ದಿವಾಳಿಯತ್ತ ಸಾಗುತ್ತದೆ ಎಂದು ಮಾಧುಸ್ವಾಮಿ ಬಣ್ಣಿಸಿದರು.
ಸಾಮಾನ್ಯ ಮನುಷ್ಯ ಸಾಲ ಮಾಡಲು ಹೋದರೆ ಇದನ್ನು ತೀರಿಸಲು ನಿನಗಿರುವ ಆದಾಯ ಮೂಲ ಯಾವುದು ಎಂದು ಬ್ಯಾಂಕುಗಳು ಕೇಳುತ್ತವೆ. ಆದರೆ ಸರ್ಕಾರ ತಾನು ಮಾಡುತ್ತಿರುವ ಸಾಲದ ಮೇಲಿನ ಬಡ್ಡಿಯನ್ನೂ ಕಳೆದ ವರ್ಷ ಕಟ್ಟಿಲ್ಲ. ಇದು ಯಾವುದರ ಸೂಚನೆ ಎಂದು ಪ್ರಶ್ನಿಸಿದರು.
ರಾಜ್ಯದ ಕೃಷಿ ವಲಯದ ಜಿಡಿಪಿ ಪ್ರಮಾಣ ಶೇ.3.7 ರಷ್ಟಿದೆ. ಸೇವಾ ವಲಯದ ಜಿಡಿಪಿ ಹೆಚ್ಚಿದೆ ಎಂದು ಹೇಳಿದರೆ ಅದು ಗ್ರಾಮೀಣ ವಲಯದ ಮೇಲಿನ ಹೊಡೆತವೇ ಹೊರತು ಬೇರೇನಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ನಲವತ್ನಾಲ್ಕು ಲಕ್ಷ ತೆಂಗು ಮರಗಳು ನಾಶವಾಗಿವೆ. ಇದಕ್ಕೆ ಪರಿಹಾರವಾಗಿ ಕುಮಾರಸ್ವಾಮಿ ನೂರು ಕೋಟಿ ರೂ. ಹಣ ಕೊಟ್ಟಿದ್ದಾರೆ. ಆದರೆ ಅದರ ಬಗ್ಗೆ ತಕರಾರು ಮಾಡುವವರಿದ್ದಾರೆ. ಆದರೆ ನೆನಪಿಡಿ ತೆಂಗು ನಾಶವಾದರೆ ಮರಳಿ ಜಾಗದಲ್ಲಿ ಕಾಯಿ ಕೊಡುವ ಮತ್ತೊಂದು ಮರ ಬೆಳೆಯಲು ಇಪ್ಪತ್ತು ವರ್ಷ ಬೇಕು.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕಡೆ ಗಮನ ಹರಿಸಿ. ಅದನ್ನು ಬಿಟ್ಟು ಪ್ರತಿ ವರ್ಷ ಸಾಲ ಮಾಡುತ್ತಾ ಹೋಗುವುದು, ಖೋತಾ ಬಜೆಟ್ ಬೇರೆ ತೋರಿಸುವುದು ಮಾಡಿದರೆ ರಾಜ್ಯದ ಗತಿ ಏನಾಗಬೇಕು ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ