ಬಜೆಟ್ ಅಸಮತೋಲನದಿಂದ ಕೂಡಿದೆ – ಶಾಸಕ ಅರವಿಂದ ಲಿಂಬಾವಳಿ

 

ಬೆಂಗಳೂರು, ಜು.11- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಅಸಮತೋಲನದಿಂದ ಕೂಡಿದ್ದು, ಇದರ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಬೇಕೆಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಜೆಟ್‍ನಲ್ಲಿ ಕರ್ನಾಟಕವನ್ನು ಸಮಗ್ರ ಅಭಿವೃದ್ಧಿಪಡಿಸುವ ದೂರದೃಷ್ಟಿ ಯೋಜನೆಗಳಿಲ್ಲ. ಈ ಬಜೆಟ್ ಅನುಷ್ಠಾನವಾದ ನಂತರ ಪ್ರಾದೇಶಿಕ ಅಸಮತೋಲನ ಉಂಟಾಗಿದೆ. ಇದಕ್ಕೆ ಸರ್ಕಾರ ಸಮಿತಿ ರಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಕರಾವಳಿ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಸಂಪೂರ್ಣ ಕರ್ನಾಟಕ ಅಭಿವೃದ್ಧಿಪಡಿಸುವಂತಹ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಕೇವಲ ಮೂರು ಜಿಲ್ಲೆಗೆ ಮಾತ್ರ ಒತ್ತು ನೀಡಲಾಗಿದೆ ಎಂದು ಆರೋಪಿಸಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಈ ಹಿಂದೆ ಡಾ.ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈಗ ರಾಜ್ಯ ಸರ್ಕಾರ ಅದೇ ಮಾದರಿಯಲ್ಲಿ ಸಮಿತಿ ರಚನೆ ಮಾಡಲಿ. ಇದರಿಂದ ಅಸಮತೋಲನ ನಿವಾರಣೆಗೆ ಸಹಕಾರಿಯಾಗಲಿದೆ ಎಂದರು.
ರಾಮನಗರ, ಮಂಡ್ಯ, ಹಾಸನ ಜಿಲ್ಲೆಗಳಿಗೆ ಮಾತ್ರ ಬಜೆಟ್‍ನಲ್ಲಿ ಒತ್ತು ನೀಡಲಾಗಿದೆ. ಉಳಿದಂತೆ ಎಲ್ಲ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಒಂದು ಬಜೆಟ್ ಸರ್ಕಾರದ ಮುಂದಿನ ಭವಿಷ್ಯವನ್ನು ರೂಪಿಸುವಂತಿರಬೇಕು. ಕೇವಲ ತನ್ನ ಓಟ್‍ಬ್ಯಾಂಕ್ ಭದ್ರಪಡಿಸಿಕೊಳ್ಳುವ ಸ್ವ-ಹಿತಾಸಕ್ತಿ ಇರಬಾರದು. ಇದರಿಂದ ಪ್ರಾದೇಶಿಕ ಅಸಮತೋಲನ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಜೆಟ್‍ನಲ್ಲಿ ಜನತೆಗೆ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ. ಇದು ಸಿದ್ದರಾಮಯ್ಯ ಬಜೆಟ್ ಎಂದು ಕಾಂಗ್ರೆಸಿಗರು ಹೇಳಿಕೊಂಡರೆ, ಕುಮಾರಸ್ವಾಮಿ ಬಜೆಟ್ ಎಂದು ಜೆಡಿಎಸ್‍ನವರು ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಜನರು ಗೊಂದಲಕ್ಕೆ ಸಿಲುಕಿದ್ದಾರೆ. ಮೊದಲು ಈ ನಿವಾರಣೆ ಸರಿಪಡಿಸುವಂತೆ ಲಿಂಬಾವಳಿ ಒತ್ತಾಯಿಸಿದರು.
ಸರ್ಕಾರ ಟೇಕಾಫ್ ಆಗಿಲ್ಲ ಎನ್ನುವುದಕ್ಕಿಂತ ಸಮ್ಮಿಶ್ರ ಸರ್ಕಾರ ರನ್‍ವೇಗೇ ಬಂದಿಲ್ಲ. ನಿಮ್ಮ ಬಜೆಟ್‍ನಲ್ಲಿ ತಕ್ಷಣದ ಸಮಸ್ಯೆ ಬಗೆಹರಿಸಲು ಯಾವುದೇ ಘೋಷಣೆ ಮಾಡಿಲ್ಲ. ಇದರಿಂದ ಯಾರಿಗೆ ಉಪಯೋಗ ಎಂದು ಪ್ರಶ್ನಿಸಿದರು.
ಕರಾವಳಿ, ಮಲೆನಾಡು ಸೇರಿದಂತೆ ನಾನಾ ಕಡೆ ಮಳೆ ಸುರಿದು ರಸ್ತೆಗಳು ಹಾಳಾಗಿ ಅನೇಕ ಕಡೆ ಗುಂಡಿ ಬಿದ್ದಿವೆ, ಮನೆ ಕುಸಿದು ಬಿದ್ದಿವೆ, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಗುಂಡಿಗಳನ್ನು ಮುಚ್ಚಲು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಧಾನಿ ಬೆಂಗಳೂರಿನಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯಕ್ಕೆ 30 ಕೋಟಿ ನೀಡಲಾಗಿದೆ. ಅದೇ ರೀತಿ ಶಿವಮೊಗ್ಗ, ತುಮಕೂರು ಮತ್ತು ಹಂಪಿಯಲ್ಲಿ ಬೇರೆ ಬೇರೆ ವಿವಿಗಳ ನಿರ್ಮಾಣಕ್ಕೆ ಕಡಿಮೆ ಹಣ ನೀಡಲಾಗಿದೆ. ರಾಮನಗರದಲ್ಲಿ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು 40 ಕೋಟಿ, ಕನಕಪುರದಲ್ಲಿ ವೈದ್ಯಕೀಯ ಕಾಲೇಜು, ಮೈಸೂರಿನಲ್ಲಿ ರೇಷ್ಮೆ ಹುಳು ಸಂಶೋಧನಾ ಕೇಂದ್ರಕ್ಕೆ 5 ಕೋಟಿ, ಮಂಡ್ಯದಲ್ಲಿ ಸಮಗ್ರ ಅಭಿವೃದ್ಧಿಗೆ 30 ಕೋಟಿ, ಹಾಸನ ರಿಂಗ್ ರಸ್ತೆ ನಿರ್ಮಾಣಕ್ಕೆ 30 ಕೋಟಿ, ಚನ್ನಪಟ್ಟಣದಲ್ಲಿ ಕೆರೆ ಹೂಳೆತ್ತಲು ವಿಶೇಷ ಅನುದಾನ ಸೇರಿದಂತೆ ಸೀಮಿತ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದನ್ನು ಬೇರೆ ಜಿಲ್ಲೆಗಳಿಗೂ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.
ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ ಯಾವುದೇ ಅನುದಾನ ನೀಡಿಲ್ಲ. ಸಂಚಾರ ಸಮಸ್ಯೆ ರಸ್ತೆಗಳ ಅಗಲೀಕರಣ, ಫ್ಲೈ ಓವರ್ ನಿರ್ಮಾಣ ಸೇರಿದಂತೆ ಸಾರ್ವಜನಿಕರ ಕನಿಷ್ಠ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕಿತ್ತು. ಇಂದು ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆ ಬಹು ದೊಡ್ಡ ಸಮಸ್ಯೆಯಾಗಿದೆ. ಬಿಬಿಎಂಪಿ, ಬಿಡಿಎ ನಡುವೆ ಸಮನ್ವಯತೆ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇದಕ್ಕೆ ಸರ್ಕಾರದ ಬಳಿ ಪರಿಹಾರವಿದೆಯೇ ಎಂದು ಲಿಂಬಾವಳಿ ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ