ದೇವರಿಗೆ ಅನುದಾನ ನೀಡುವಂತೆ ಮುಜರಾಯಿ ಸಚಿವರಿಗೆ ಮನವಿ!

 

ಬೆಂಗಳೂರು, ಜು.11- ಕರುಣೆ, ದಯೆ ತೋರಿ ಎಂದು ಭಗವಂತನ ಮೊರೆ ಹೋಗುವುದು ಸಹಜ. ಆದರೆ, ದೇವರುಗಳ ಬಗ್ಗೆ ಕರುಣೆ ತೋರಿ… ನಮ್ಮ ಬಡ ದೇವರುಗಳಿಗೆ ಒಂದಷ್ಟು ಅನುದಾನ ಬಿಡುಗಡೆ ಮಾಡಿ ಎಂದು ಪಕ್ಷಭೇದ ಮರೆತು ಪರಿ ಪರಿಯಾಗಿ ಮುಜರಾಯಿ ಸಚಿವರನ್ನು ಬೇಡಿಕೊಂಡ ಸ್ವಾರಸ್ಯಕರ ಘಟನೆ ವಿಧಾನ ಪರಿಷತ್‍ನಲ್ಲಿಂದು ನಡೆಯಿತು.
ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಧರ್ಮಸೇನ್ ಅವರು ವಿಷಯ ಪ್ರಸ್ತಾಪಿಸಿ, ಅದೇಕೋ ಏನೋ ದೊಡ್ಡ ದೊಡ್ಡ ದೇವಾಲಯಗಳಿಗೆ ಹಣ ಬಿಡುಗಡೆ ಆಗುತ್ತದೆ. ನಾನು ಎರಡು ವರ್ಷಗಳಿಂದ ನಮ್ಮೂರ ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣ ನೀಡುವಂತೆ ಪತ್ರ ಕೊಟ್ಟಿದ್ದೇನೆ. ಆದರೆ, ಹಣವೇ ಬಿಡುಗಡೆಯಾಗಿಲ್ಲ. ಅದೇನು ಕರ್ಮ ಮಾಡಿವೆಯೋ ನಮ್ಮ ದೇವರುಗಳು ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಜರಾಯಿ ಸಚಿವ ರಾಜಶೇಖರ್, ರಾಜ್ಯದಲ್ಲಿ 34,556 ದೇವಸ್ಥಾನಗಳಿವೆ. 25 ಲಕ್ಷ ಆದಾಯ ಬರುವ ಎ ವರ್ಗದ 192, 5 ಲಕ್ಷಕ್ಕಿಂತ ಹೆಚ್ಚು ಆದಾಯ ಬರುವ ಬಿ ವರ್ಗದ 154 ದೇವಸ್ಥಾನಗಳು, ಸಿ ವರ್ಗದವು ಸೇರಿದಂತೆ 34,556 ದೇವಸ್ಥಾನಗಳಿವೆ. ಈ ಎಲ್ಲ ದೇವಸ್ಥಾನಗಳಿಗೆ ಬೇಡಿಕೆಗೆ ತಕ್ಕಂತೆ ಆಯವ್ಯಯದಲ್ಲಿ ಅನುದಾನ ಕೊಡಲಾಗುವುದು ಎಂದರು.
ಬಿಜೆಪಿಯ ಕೆ.ಬಿ.ಶಾಣಪ್ಪ ಈ ವೇಳೆ ಮಾತನಾಡಿ, ಅತಿ ಹೆಚ್ಚು ದೇವರುಗಳಿರುವ ದೇಶವೆಂದರೆ ನಮ್ಮ ಭಾರತ. ನಮ್ಮ ರಾಜ್ಯದಲ್ಲಿ 34 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಿವೆ. ದೇವರಲ್ಲೂ ಕ್ಯಾಟಗರಿ ಮಾಡಿದ್ದೀರಿ. ಸಿ ಕ್ಯಾಟಗರಿ ಎಂದರೆ ದುರ್ಗಮ್ಮ, ಧರ್ಮಪ್ಪ, ಮಾರಮ್ಮ ಮತ್ತಿತರ ಬಡ ದೇವರುಗಳು. ಈ ಸಣ್ಣ ದೇವರುಗಳ ಬಗ್ಗೆಯೂ ಕರುಣೆ ತೋರಿಸಿ. ಈ ದೇವರುಗಳಿಗೇ ಹೆಚ್ಚು ಅನುದಾನ ಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್‍ನ ಸಂದೇಶ್ ನಾಗರಾಜ್ ಮಾತನಾಡಿ, ಎ ಕ್ಯಾಟಗರಿ ದೇವಸ್ಥಾನಗಳಿಗೂ ಬೇಡ, ಬಿ ಕ್ಯಾಟಗರಿ ದೇವಸ್ಥಾನಗಳಿಗೂ ಬೇಡ. ಸಿ ಕ್ಯಾಟಗರಿ ದೇವಸ್ಥಾನಗಳಿಗೆ ನೀವು ಅನುದಾನ ಕೊಟ್ಟು ಆಶೀರ್ವಾದ ಪಡೆಯಬೇಕು. ಮೊದಲೇ ಮುಜರಾಯಿ ಇಲಾಖೆ ಸಚಿವರಾದವರು ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಭೀತಿ ಇದೆ ಎಂದು ಹೇಳಿದರು.
ಆಗ ಸಚಿವರು ಮಾತನಾಡಿ, ಪ್ರತಿಪಕ್ಷದ ನಾಯಕರಾದ ಶ್ರೀನಿವಾಸ್ ಪೂಜಾರಿ ಅವರು ಈ ಖಾತೆ ಸಚಿವರಾಗಿದ್ದರು. ಖರ್ಗೆಯವರು ಕೂಡ ಈ ಖಾತೆ ವಹಿಸಿಕೊಂಡಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬಸವರಾಜ ಹೊರಟ್ಟಿ ಅವರು ನಿಮ್ಮ ಮಂತ್ರಿಗಿರಿ ಹೋಗುವುದಿಲ್ಲ. ಸಿ ಗ್ರೇಡ್ ದೇವಸ್ಥಾನಗಳನ್ನೊಂದಷ್ಟು ಅಭಿವೃದ್ಧಿ ಮಾಡಿ ಎಂದು ಸಲಹೆ ನೀಡಿದರು.
ನಮ್ಮ ತಂದೆ ಬಸವರಾಜ ಪಾಟೀಲ್ ಅವರೊಂದಿಗೆ ಕೆ.ಬಿ.ಶಾಣಪ್ಪ ಅವರು ಕೆಲಸ ಮಾಡಿದ್ದಾರೆ. ಅವರ ಸಲಹೆ ಪಡೆದು ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಸಚಿವರು ಹೇಳಿದಾಗ, ಶಾಣಪ್ಪ ಅವರು ಶ್ರೀಮಂತ ದೇವರುಗಳ ವಿಷಯವೇ ಬೇಡ. ಬಡ ದೇವರನ್ನು ನೋಡಪ್ಪ ಅಷ್ಟೇ ಸಾಕು ಎಂದರು.
ಒಟ್ಟಾರೆ, ವಿಧಾನ ಪರಿಷತ್‍ನಲ್ಲಿ ಬಡವ, ಶ್ರೀಮಂತ ದೇವರುಗಳ ಮೇಲಿನ ಚರ್ಚೆ ಸ್ವಾರಸ್ಯಕರವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ