ಬೆಂಗಳೂರು, ಜು.6-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸ್ಥಾನಕ್ಕಾಗಿ ಕಸರತ್ತು ಈಗಾಗಲೇ ಆರಂಭಗೊಂಡಿದೆ.
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಹೊಸ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಮತ್ತೆ ಈಗ ಬಿಬಿಎಂಪಿಯಲ್ಲಿ ದೋಸ್ತಿ ಮುಂದುವರೆಯುವುದು ಬಹುತೇಕ ನಿಶ್ಚಿತವಾಗಿರುವುದರಿಂದ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಈ ಬಾರಿ ಒಕ್ಕಲಿಗರ ಸಮುದಾಯಕ್ಕೆ ಅವಕಾಶ ನೀಡಬೇಕೆಂಬ ಕೂಗು ಕೇಳಿ ಬರುತ್ತಿವೆ. 2003ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಗಾಯತ್ರಿನಗರ ವಾರ್ಡ್ನಿಂದ ಗೆದ್ದಿದ್ದ ಒಕ್ಕಲಿಗ ಸಮುದಾಯದ ಸಿ.ಎಂ.ನಾಗರಾಜ್ ನಂತರ ಆ ಜನಾಂಗದ ಯಾರೊಬ್ಬರಿಗೂ ಅದೃಷ್ಟ ಒಲಿಯಲಿಲ್ಲ. ಕೆಲವೊಂದು ಬಾರಿ ಅವಕಾಶ ಸಿಕ್ಕರೂ ಅದು ಕೊನೆ ಘಳಿಗೆಯಲ್ಲಿ ಕೈತಪ್ಪುತ್ತಿತ್ತು. ಆದರೆ ಈ ಬಾರಿ ಹಾಗಾಗಬಾರದೆಂದು ಕೆಲ ಒಕ್ಕಲಿಗ ಮುಖಂಡರು ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿ ಪ್ರಬಲ ಲಾಬಿ ಆರಂಭಿಸಿದ್ದಾರೆ.
ಪ್ರಸ್ತುತ ಸಾಮಾನ್ಯ ಮಹಿಳಾ ವರ್ಗಕ್ಕೆ ಮೇಯರ್ ಸ್ಥಾನ ಮೀಸಲಾಗಿದ್ದು, ಸೌಮ್ಯ ಶಶಿಕುಮಾರ್ ಪರವಾಗಿ ಕೆಲವರು ಈಗಾಗಲೇ ನಾಯಕರ ಮೇಲೆ ತಮ್ಮ ವಕಾಲತ್ತು ಮಂಡಿಸಿದ್ದಾರೆ. ಕಳೆದ 2016-17ರ ಮೇಯರ್ ಆಯ್ಕೆ ಸಂದರ್ಭದಲ್ಲಿ ಪ್ರಕಾಶನಗರದ ವಾರ್ಡ್ನ ಜಿ.ಪದ್ಮಾವತಿ ಹಾಗೂ ಸೌಮ್ಯ ಶಶಿಕುಮಾರ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಂತಿಮ ಕ್ಷಣದವರೆಗೂ ಒಕ್ಕಲಿಗ ಸಮುದಾಯಕ್ಕೇ ಅವಕಾಶ ನೀಡಬೇಕೆಂದು ನಿರ್ಧಾರವಾಗಿದ್ದರೂ ಸಹ ಕೊನೆ ಘಳಿಗೆಯಲ್ಲಿ ಅದು ಕೈ ತಪ್ಪಿತು. ವರಿಷ್ಠರ ಅಣತಿ ಮೇರೆಗೆ ಪಕ್ಷದ ನಿಷ್ಠೆಯನ್ನು ಪಾಲಿಸಿ ಸೌಮ್ಯ ಶಶಿಕುಮಾರ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಶಾಂತಿನಗರ ವಾರ್ಡ್ನಲ್ಲಿ ಸ್ಪರ್ಧಿಸಿ 7 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಹ್ಯಾರೀಸ್ ಅವರಿಗೆ ಅತ್ಯಂತ ಮತಗಳ ಮುನ್ನಡೆಯನ್ನು ತಂದುಕೊಟ್ಟಿದ್ದರು.
ಆರಂಭದಿಂದಲೂ ತಮ್ಮ ಕ್ಷೇತ್ರವನ್ನು ಕಾಂಗ್ರೆಸ್ನ ಭದ್ರಕೋಟೆಯಾಗಿ ಮಾರ್ಪಡಿಸಿ ಸಂಘಟನೆಗೆ ಹೆಚ್ಚು ಒತ್ತು ನೀಡಿ ಸ್ಥಳೀಯ ಹಾಗೂ ಬೆಂಗಳೂರು ಗ್ರಾಮಾಂತರ ರಾಮನಗರ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಸೌಮ್ಯ ಶಶಿಕುಮಾರ್ ಅವರಿಗೆ ಮೇಯರ್ ಸ್ಥಾನ ನೀಡಲೇಬೇಕೆಂದು ಒಕ್ಕಲಿಗ ಸಂಘ ಕೂಡ ತನ್ನ ದಾಳವನ್ನು ಹೊರಳಿಸಿದೆ.
ಇದರ ನಡುವೆ ಜಯನಗರದ ಗಂಗಾಂಬಿಕ ಅವರ ಹೆಸರು ಕೂಡ ಕೇಳಿಬರುತ್ತಿದ್ದು, ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ.
ಈಗಾಗಲೇ ಕಾಂಗ್ರೆಸ್ನ ವರಿಷ್ಠರು ಕೂಡ ಇದರ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಹಿಂದೆ 1996ರಲ್ಲಿ ಪದ್ಮಾವತಿ ಗಂಗಾಧರಗೌಡ ನಂತರ ಈಗ ಮತ್ತೆ ಒಕ್ಕಲಿಗ ಸಮುದಾಯದ ಮಹಿಳೆಯೊಬ್ಬರು ಮೇಯರ್ ಸ್ಥಾನಕ್ಕೆ ಆಯ್ಕೆಯಾದರೆ ದೋಸ್ತಿ ಪಕ್ಷಗಳಿಗೂ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಲಾಬಿ:
ಇದರ ನಡುವೆ ಜೆಡಿಎಸ್ ಕೂಡ ಅಖಾಡಕ್ಕಿಳಿದಿದ್ದು, ಈ ಬಾರಿ ನಮಗೆ ಮೇಯರ್ ಸ್ಥಾನ ಬಿಟ್ಟುಕೊಡಿ ಎಂಬ ಬೇಡಿಕೆಯನ್ನು ಮುಂದಿಡುತ್ತಿದೆ. ಮಹಾಲಕ್ಷ್ಮಿಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಅವರ ಪತ್ನಿ ಹೇಮಲತಾ ಅವರಿಗೆ ಮೇಯರ್ಪಟ್ಟ ನೀಡಬೇಕೆಂಬ ಒತ್ತಡ ಕೇಳಿಬರುತ್ತಿದೆ.
ಇದಲ್ಲದೆ, ನೇತ್ರಾನಾರಾಯಣ್, ಮಂಜುಳಾನಾರಾಯಣಸ್ವಾಮಿ ಸೇರಿದಂತೆ ಜೆಡಿಎಸ್ನ ಇತರರು ಕೂಡ ರೇಸ್ಗಿಳಿದಿದ್ದಾರೆ. ಒಟ್ಟಾರೆ ಈಗ ಮೇಯರ್ ಸ್ಥಾನಕ್ಕೆ ಪೈಪೆÇೀಟಿ ಆರಂಭಗೊಂಡಿದ್ದು, ಮೈತ್ರಿ ಹೇಗೆ ಮುಂದುವರೆಯುತ್ತದೆ ಮತ್ತು ಯಾರಿಗೆ ಅದೃಷ್ಟ ಒಲಿಯುತ್ತದೆ ಎಂಬುದು ಕುತೂಹಲಕ್ಕೆ ಹೆಡೆಮಾಡಿಕೊಟ್ಟಿದೆ.