ವಿಧಾನ ಪರಿಷತ್‍ನ ಸಭಾಪತಿಗಳ ಚುನಾವಣೆಗೆ ಸರಕಾರ ಸಿದ್ಧ – ಕೃಷ್ಣಭೈರೇಗೌಡ

 

ಬೆಂಗಳೂರು,ಜೂ.6- ಬಜೆಟ್ ಅಧಿವೇಶನ ಮುಗಿಯುವುದರೊಳಗೆ ವಿಧಾನ ಪರಿಷತ್‍ನ ಸಭಾಪತಿಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಕಾನೂನು ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಹಂಗಾಮಿ ಸಭಾಪತಿಗಳ ಇತಿಮಿತಿಗಳು ಹಾಗೂ ಅವರು ತೆಗೆದುಕೊಳ್ಳುವ ಆಡಳಿತಾತ್ಮಕ ನಿರ್ಧಾರಗಳ ಕುರಿತಂತೆ ವಿಧಾನಪರಿಷತ್‍ನಲ್ಲಿಂದು ನಡೆದ ಚರ್ಚೆ ವೇಳೆ ಉತ್ತರ ನೀಡಿದ ಸಚಿವರು, ಅಧಿವೇಶನ ಮುಗಿಯುವುದರೊಳಗೆ ಸಭಾಪತಿಗಳ ಚುನಾವಣೆ ನಡೆಯಲಿದೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದರು.
ಸಭಾಧ್ಯಕ್ಷರ ಆಯ್ಕೆ ಮಾಡಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಪ್ರತಿಪಕ್ಷಗಳ ಸದಸ್ಯರು ಇದಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಈಗಾಗಲೇ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸಿಎಂಗೆ ತೀರ್ಮಾನ ತೆಗೆದುಕೊಳ್ಳಲು ಒಪ್ಪಿಗೆ ನೀಡಲಾಗಿದೆ. ರಾಜ್ಯಪಾಲರಿಗೆ ಪತ್ರ ಬರೆದು ಚುನಾವಣೆ ನಡೆಸಲು ಅವಕಾಶ ನೀಡಬೇಕೆಂದು ಕೋರಲಾಗುತ್ತದೆ. ಸಂವಿಧಾನದ ಪ್ರಕಾರವೇ ಸರ್ಕಾರ ನಡೆದುಕೊಳ್ಳಲಿದೆ ಎಂದರು.
ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನಗಳು ಖಾಲಿ ಇದ್ದಾಗ ರಾಜ್ಯಪಾಲರು ನೇಮಿಸಿರುವ ಹಂಗಾಮಿ ಸಭಾಪತಿ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಅವಕಾಶ ಇರುತ್ತದೆ.
ಸಂವಿಧಾನ ಪರಿಚ್ಛೇಧ 184 ಪ್ರಕಾರ ಹಂಗಾಮಿ ಸಭಾಪತಿಗಳು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದೆಂಬ ನಿಯಮವಿಲ್ಲ. ಮುಂದಿನ ಸಭಾಧ್ಯಕ್ಷರ ಆಯ್ಕೆ ಆಗುವವರೆಗೂ ಅವರು ತೆಗೆದುಕೊಳ್ಳುವ ನಿರ್ಧಾರಗಳು ಕಾನೂನಾತ್ಮಕವಾಗಿರುತ್ತದೆ. ಹಾಲಿ ಸಭಾಪತಿಗಳು ತೆಗೆದುಕೊಂಡಿರುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಕೋರಿದರು.
ಸಭಾಪತಿಗಳ ಸ್ಥಾನ ಖಾಲಿಗೂ ಮತ್ತು ಗೈರಿಗೂ ತುಂಬ ವ್ಯತ್ಯಾಸವಿದೆ. ಸಭಾಪತಿ ಸ್ಥಾನ ಮತ್ತು ಉಪಸಭಾಪತಿ ಖಾಲಿ ಇದ್ದ ಸಂದರ್ಭದಲ್ಲಿ ರಾಜ್ಯಪಾಲರ ಆದೇಶ ಅನುಸಾರ ಹಂಗಾಮಿ ಸಭಾಪತಿಗಳನ್ನು ನೇಮಕ ಮಾಡಬಹುದು. ಹಾಗೆಂದ ಮಾತ್ರಕ್ಕೆ ಅವರು ಇಂತಿಷ್ಟೇ ಕೆಲಸ ಮಾಡಬೇಕೆಂಬ ಕಾನೂನು ಇಲ್ಲ. ಅವರು ಕಾರ್ಯ ಕಲಾಪಗಳು ಸೇರಿದಂತೆ ಯಾವುದೇ ವಿಷಯದ ಬಗ್ಗೆ ತೀರ್ಮಾನತೆಗೆದುಕೊಳ್ಳಲು ಸ್ವತಂತ್ರರು ಎಂದರು.
ಹಂಗಾಮಿ ಸಭಾಪತಿಗಳು ಎಲ್ಲಿಯೂ ಕೂಡ ಕಾರ್ಯ-ಕಲಾಪಗಳನ್ನು ನಡೆಸಬಾರದು.ಕೇವಲ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಬೇಕೆಂಬ ನಿಯಮವಿಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಿಯಮವಾಗಿದೆ.
ಸರ್ಕಾರ ಸಭಾಧ್ಯಕ್ಷರ ನೇಮಕ ಮಾಡಲು ಮುಕ್ತ ಮನಸ್ಸು ಹೊಂದಿರದೆ ಇದರಲ್ಲಿ ಅನುಮಾನ ಏಕೆ ಎಂದು ಪ್ರಶ್ನಿಸಿದರು.
ಸಂಪುಟದಲ್ಲಿ ಈಗಾಗಲೇ ಚರ್ಚೆಯಾಗಿ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ. ಅಧಿವೇಶನ ಮುಗಿಯುವುದರೊಳಗೆ ಚುನಾವಣೆ ನಡೆಯಲಿದೆ. ಈ ಬಗ್ಗೆ ಯಾರೊಬ್ಬರು ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಂತದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಅವರು ಬಳಸಿದ ಪದವೊಂದು ತೀವ್ರ ಗದ್ದಲಕ್ಕೆ ಕಾರಣವಾಯಿತು. ಸಚಿವ ಕೃಷ್ಣಬೈರೇಗೌಡರು ಚಾಕು ಚಕ್ಯತೆಯಿಂದ ಉತ್ತರ ನೀಡಿದ್ದಾರೆ ಎಂದು ಹೇಳಿದಾಗ ಆಡಳಿತ ಪಕ್ಷದ ಸದಸ್ಯರು ಮುಗಿಬಿದ್ದರು.
ನಾನು ಚಾಕು ಹಿಡಿದುಕೊಂಡು ಉತ್ತರ ನೀಡಿಲ್ಲ. ಸಂವಿಧಾನದ ಪ್ರಕಾರವೇಉತ್ತರ ಕೊಟ್ಟಿದ್ದೇನೆ. ಹಿರಿಯ ಸದಸ್ಯರಿಂದ ಇಂತಹ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ನಡುವೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಆಯನೂರು ಮಂಜುನಾಥ್ ಪರ ಬಿಜೆಪಿ ಸದಸ್ಯರು ನಿಂತರೆ ಆಡಳಿತ ಪಕ್ಷದ ಸದಸ್ಯರು ಕೃಷ್ಣಬೈರೇಗೌಡರ ಪರ ಬೆಂಬಲಕ್ಕೆ ನಿಂತರು.
ಈ ಹಂತದಲ್ಲಿ ಕಾಂಗ್ರೆಸ್‍ನ ಸಿ.ಎಂ.ಇಬ್ರಾಹಿಂ ಅವರು ಸಭಾಪತಿಗಳು ಯಾವುದೇ ತೀರ್ಮಾನ ತೆಗೆದುಕೊಳ್ಳಬಹುದು. ಇಲ್ಲಿನಡೆದಿರುವ ಚರ್ಚೆ ಬಗ್ಗೆ ನೋವು ಮಾಡಿಕೊಳ್ಳಬಾರದು ಎಂದರು.
ಆಗ ಸಭಾಪತಿಗಳು 10 ನಿಮಿಷಗಳ ಕಾಲ ಸದನವನ್ನುಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ