ಹಂಗಾಮಿ ಸಭಾಪತಿ ಅವರ ಆಡಳಿತಾತ್ಮಕ ನಿರ್ಧಾರಗಳು,

 

ಬೆಂಗಳೂರು,ಜು.6-ಹಂಗಾಮಿ ಸಭಾಪತಿ ಅವರ ಆಡಳಿತಾತ್ಮಕ ನಿರ್ಧಾರಗಳು, ತೆಗೆದುಕೊಳ್ಳಬಹುದಾದ ತೀರ್ಮಾನಗಳು, ಅವರ ಅಧಿಕಾರ ಅವಧಿ ಸೇರಿದಂತೆ ಮತ್ತಿತರ ವಿಷಯಗಳ ಕುರಿತಂತೆ ವಿಧಾನಪರಿಷತ್ ನಲ್ಲಿಂದು ಚರ್ಚೆ ನಡೆದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ವಾತಾವರಣ ನಿರ್ಮಾಣವಾಯಿತು.
ಬೆಳಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಬಿ.ಶಾಣಪ್ಪ ಅವರು, ಹಂಗಾಮಿ ಸಭಾಪತಿಗಳ ಅಧಿಕಾರಾವಧಿ ಕುರಿತಂತೆ ಇಂದು ಹಾದಿಬೀದಿಯಲ್ಲಿ ಚರ್ಚೆಯಾಗುತ್ತಿದೆ. ಅವರು ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ.
ಹಂಗಾಮಿ ಸಭಾಪತಿಗಳು ಕೇವಲ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಬೇಕೆ, ಇಲ್ಲವೇ ಯಾವುದಾದರೊಂದು ಪ್ರಮುಖ ತೀರ್ಮಾನ ತೆಗೆದುಕೊಳ್ಳಬಹುದೇ ಎಂಬುದರ ಬಗ್ಗೆ ಇಂದು ಚರ್ಚೆಯಾಗಬೇಕು.
ಈ ಸದನಕ್ಕೆ ಶತಮಾನಗಳ ಇತಿಹಾಸವಿದೆ. ಸಭಾಪತಿಗಳ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ನಡೆಸುವುದು ಗೌರವ ತರುವುದಿಲ್ಲ. ಮೊದಲು ಹಂಗಾಮಿ ಸಭಾಪತಿಗಳು ಮುಂದುವರೆಯಬೇಕೆ, ಬೇಡವೇ ಎಂದು ಸರ್ಕಾರ ತೀರ್ಮಾನಿಸಲಿ ಎಂದು ಚರ್ಚೆಗೆ ನಾಂದಿ ಹಾಡಿದರು.
ಹಂಗಾಮಿ ಸಭಾಪತಿಗಳು ಕುರಿತಂತೆ ಚರ್ಚೆ ಮಾಡಬೇಕೆಂದೇ ಸದನ ಆರಂಭವಾಗುತ್ತಿರುವುದು ನೋವಿನ ಸಂಗತಿ. ಇದಕ್ಕೆ ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದಿತ್ತು. ಸರ್ಕಾರ ಯಾಕೆ ಮೊಂಡು ಹಠ ಹಿಡಿದಿದೆ ಎಂದು ಪ್ರಶ್ನಿಸಿದರು.
ಈ ವೇಳೆ ಕಾಂಗ್ರೆಸ್‍ನ ಐವಾನ್ ಡಿಸೋಜ ಅವರು, ಹಂಗಾಮಿ ಸಭಾಪತಿ ಯಾವುದೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಎಂಬುದಾದರೆ ಪೂರ್ಣಾವಧಿಗೆ ಸಭಾಧ್ಯಕ್ಷರನ್ನು ಆಯ್ಕೆ ಮಾಡಲು ಇರುವ ಸಮಸ್ಯೆಯಾದರು ಏನು ಎಂದು ಪ್ರಶ್ನಿಸಿದರು.
ಈವರೆಗೂ ಹಂಗಾಮಿ ಸಭಾಪತಿಗಳು ಸದನ ನಡೆಸಿರುವುದೇ ಕಾನೂನು ಬಾಹಿರ ಎನ್ನುವುದಾದರೆ ಈ ಸದನದ ಗೌರವ ಉಳಿಯುತ್ತಾ.. ನಿಮಗೆ ಸಂಪೂರ್ಣ ಬಹುಮತ ಇರುವಾಗ ಏಕೆ ವಿಳಂಬ ಮಾಡುತ್ತೀರಿ ಶಾಣಪ್ಪ ತರಾಟೆಗೆ ತೆಗೆದುಕೊಂಡರು.
ಐವಾನ್ ಡಿಸೋಜ ಅವರು , ಸರ್ಕಾರ ಸಭಾಧ್ಯಕ್ಷರ ಆಯ್ಕೆ ವಿಷಯದಲ್ಲಿ ವಿಳಂಬ ಮಾಡುತ್ತಿಲ್ಲ. ಸಭಾಪತಿ ಹಾಗೂ ಉಪಸಭಾಪತಿ ಸ್ಥಾನ ಖಾಲಿ ಇದ್ದಾಗ ರಾಜ್ಯಪಾಲರ ನಿರ್ದೇಶನದಂತೆ ಹಂಗಾಮಿ ಸಭಾಪತಿಗಳ ನೇಮಕ ಮಾಡಲಾಗುತ್ತದೆ. ಸಂವಿಧಾನದ ಪರಿಚ್ಛೇಧ 184ರ ಪ್ರಕಾರ ರಾಜ್ಯಪಾಲರು ಹಂಗಾಮಿ ಸಭಾಪತಿಗಳನ್ನು ನೇಮಕ ಮಾಡುತ್ತಾರೆ. ಅವರು ಕಾನೂನಿನಡಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಮ್ಮ ಸಂವಿಧಾನದಲ್ಲೂ ಕೂಡ ಹಂಗಾಮಿ ಸಭಾಪತಿಗಳ ಕಾರ್ಯ ವ್ಯಾಪ್ತಿಯನ್ನು ತಿಳಿಸಿಲ್ಲ. ಪೀಠದಲ್ಲಿ ಕೂರುವವರನ್ನು ನಾವು ಹಂಗಾಮಿ ಇಲ್ಲವೇ ಪೂರ್ಣಾವಧಿ ಎಂದು ನೋಡಬಾರದು. ಸಭಾಧ್ಯಕ್ಷರು ಯಾವುದೇ ತೀರ್ಮಾನ ಕೈಗೊಂಡರೂ ಇದಕ್ಕೆ ಎಲ್ಲರೂ ಬದ್ದರಾಗಬೇಕೆಂದು ಹೇಳಿದರು.
ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯಪಾಲರು ತಮಗೆ ಇರುವ ವಿವೇಚನಾ ಅಧಿಕಾರವನ್ನು ಬಳಸಿ ಹಂಗಾಮಿ ಸಭಾಪತಿಗಳನ್ನು ನೇಮಕ ಮಾಡಿದ್ದಾರೆ. ಈ ಪ್ರಕ್ರಿಯೆ ಆರಂಭಿಸುವ ಮುನ್ನ ಕಾನೂನು ತಜ್ಞರ ಅಭಿಪ್ರಾಯ ಪಡೆದಿರುತ್ತಾರೆ. ಅಧಿವೇಶನ ಮುಗಿಯುವುದರೊಳಗೆ ಚುನಾವಣೆ ನಡೆಸಿ ಎಂದು ನಿರ್ದೇಶನ ನೀಡಿದ್ದಾರೆ.
ಹಂಗಾಮಿ ಸಭಾಪತಿಗಳು ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಬಾರದೆಂಬ ನಿಯಮವಿಲ್ಲ. ಅವರೇ ಈ ಹಿಂದೆ ನಿರ್ದೇಶನ ನೀಡುತ್ತಿದ್ದರು. ಈಗ ಪುನಃ ಅಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಎಲ್ಲಿಯೂ ಸಂವಿಧಾನಕ್ಕೆ ವಿರುದ್ದವಾಗಿಲ್ಲ. ರಾಜ್ಯಪಾಲರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ. ಹಂಗಾಮಿ ಸಭಾಪತಿಯವರು ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೆ ಅವಕಾಶವಿದೆ ಎಂದು ಹೇಳಿದರು.
ಅದಿವೇಶನ ಮುಗಿಯುವುದರೊಳಗೆ ಸಭಾಪತಿಗಳ ಚುನಾವಣೆ ನಡೆಯಲಿದೆ ಅಲ್ಲಿಯವರೆಗೆ, ಸಭಾಪತಿ ಏನೇ ತೀರ್ಮಾನ ಕೈಗೊಂಡರೂ ಎಲ್ಲರೂ ಪಾಲನೆ ಮಾಡಬೇಕೆಂದರು. ಈ ವೇಳೆ ಕಾಂಗ್ರೆಸ್ ಶರಣಪ್ಪ ಮಟ್ಟು ಮಾತನಾಡಿ, ಯಾವುದೇ ಸಂದರ್ಭದಲ್ಲಿ ಸಭಾಪತಿ , ಉಪಸಭಾಪತಿ ಸ್ಥಾನ ಖಾಲಿ ಇದ್ದಾಗ ಹಂಗಾಮಿ ಸಭಾಪತಿಯವರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ.
ಚುನಾವಣೆ ನಡೆದು ಹೊಸ ಸಭಾಪತಿ ಆಯ್ಕೆಯಾಗುವವರೆಗೂ ಇಡೀ ಸದನಕ್ಕೆ ಅವರೇ ಕಸ್ಟೋಡಿಯನ್ ಆಗಿರುತ್ತಾರೆ. ಅವರ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಹಂಗಾಮಿ ಸಭಾಪತಿಗಳು ಕೇವಲ ಹೊಸ ಸದಸ್ಯರಿಗೆ ಪ್ರಮಾಣ ವಚನ ನೀಡಬೇಕೆಂಬ ನಿಯಮವಿಲ್ಲ.
ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಹಂಗಾಮಿ ಸಭಾಪತಿಗಳ ಕಾರ್ಯವ್ಯಾಪ್ತಿ ಬಗ್ಗೆ ಉಲ್ಲೇಖ ವಿಲ್ಲ. ಒಮ್ಮೆ ಈ ಪೀಠದಲ್ಲಿ ಕುಳಿತರೆ ನಾವು ಅವರನ್ನು ಹಂಗಾಮಿ ಇಲ್ಲವೇ ಪೂರ್ಣಾವಧಿ ಸಭಾಪತಿಗಳೆಂದು ಪರಿಗಣಿಸಬಾರದು. ಸರ್ಕಾರ ಎಲ್ಲಿಯೂ ಕೂಡ ಪ್ರಮಾದ ಎಸಗಿಲ್ಲ. ರಾಜ್ಯಪಾಲರ ನಿರ್ದೇಶನದಂತೆ ನಡೆದುಕೊಂಡಿದೆ ಎಂದು ಸಮರ್ಥಿಸಿಕೊಂಡರು. ಹಂಗಾಮಿ ಸಭಾಪತಿಗಳ ಕಾರ್ಯವ್ಯಾಪ್ತಿ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದ್ದರೆ ಈ ಪ್ರಶ್ನೆ ಉದ್ಭಿಸುತ್ತಿರಲಿಲ್ಲ ಎಂದರು. ಬಿಜೆಪಿ ಆಯನೂರು ಮಂಜುನಾಥ್ ಮಾತನಾಡಿ, ಸರ್ಕಾರದ ಬೇಜಾವ್ದಾರಿ ಹಾಗೂ ಸಭಾಪತಿಯ ಘನತೆ ಬಗ್ಗೆ ಅರಿವಿಲ್ಲದಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಹಂಗಾಮಿ ಸಭಾಪತಿಗಳು ಯಾವುದೇ ರೀತಿಯ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಾರದೆಂಬ ಕಾನೂನಿನಲ್ಲೇ ನಿಯಮವಿದೆ. ರಾಜ್ಯಪಾಲರು ಅಧಿವೇಶನ ಮುಗಿವುದರೊಳಗೆ ಚುನಾವಣೆ ನಡೆಸಿ ಎಂದು ಹೇಳಿದ್ದಾರೆ.
ಅವರು ಯಾವುದೇ ರೀತಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಈ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಮುಂದಾಗಿದೆ. ಒಂದುವೇಳೆ ಹಂಗಾಮಿ ಸಭಾಪತಿಗಳು ತೆಗೆದುಕೊಂಡ ತೀರ್ಮಾನಗಳೇ ಅಸಿಂಧು ಎನ್ನುವುದು ಸಾಬೀತಾದರೆ ಅಂಗೀಕಾರವಾಗಲಿರುವ ಬಜೆಟ್ ಬಿದ್ದುಹೋಗುತ್ತದೆ.
ನೀವು(ಬಸವರಾಜ ಹೊರಟ್ಟಿ) ಪೀಠ ತ್ಯಾಗ ಮಾಡಿ ಎಂದು ಹೇಳುವುದಿಲ್ಲ. ಹಂಗಾಮಿ ಸಭಾಪತಿಗಳ ಕಾರ್ಯ ವ್ಯಾಪ್ತಿಯ ಬಗ್ಗೆ ಕಾನೂನುನಲ್ಲಿ ಉಲ್ಲೇಖವಿದೆ. ನೀವು ಸರ್ಕಾರಕ್ಕೋ, ಯಾವುದೋ ಮರ್ಜಿಗಾಗಿ ಮುಂದುವರೆಯುವ ಅಗತ್ಯವಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ತೀರ್ಮಾನವನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಆಗ ವಿ.ಎಸ್.ಉಗ್ರಪ್ಪ , ಸಂವಿಧಾನದ 184ನೇ ಪರಿಚ್ಛೇಧ ಪ್ರಕಾರ ಹಂಗಾಮಿ ಸಭಾಪತಿಗಳು ಕೇವಲ ಹೊಸ ಸದಸ್ಯರಿಗೆ ಅಧಿಕಾರ ಗೌಪ್ಯತೆ ಬೋಧಿಸುವ ಅವಕಾಶ ಹೊಂದಿರುತ್ತಾರೆ. ಅವರು ಯಾವುದೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಬಾರದೆಂದು ಸಂವಿಧಾನದಲ್ಲಿ ಉಲ್ಲೇಖವಿದೆ.
1984ರಲ್ಲಿ ಇಂಥದೇ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ಅಂದಿನ ಹಂಗಾಮಿ ಸಭಾಪತಿಗಳ ವಿರುದ್ಧವೇ ಪ್ರತಿಪಕ್ಷಗಳು, ವಿರೋಧ ಪಕ್ಷದ ನಾಯಕರು ನೋಟಿಸ್ ನೀಡಿದ್ದರು. ಇದರಿಂದ ಸಭಾಪತಿ ಅವರು ರಾಜೀನಾಮೆ ನೀಡಬೇಕಾಯಿತು. ನಾವು ಆತ್ಮ ವಂಚನೆ ಮಾಡಿಕೊಂಡು ಮಾತನಾಡಬಾರದು. ಇದರಿಂದ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಿದಂತಾಗುತ್ತದೆ.
1984ರಲ್ಲಿ ಹಂಗಾಮಿ ಸಭಾಪತಿಯವರು ತೆಗೆದು ಹಾಕಲು ತೆಗೆದುಕೊಂಡಿರುವ ನಿರ್ಣಯ ಈಗಲೂ ಇದೆ. ನಾವು ಕಾನೂನಿಗೆ ವಿರುದ್ದವಾಗಿ ಇಲ್ಲವೇ ಸಂವಿಧಾನಕ್ಕೆ ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡರೆ ಅದಕ್ಕೆ ಅವಕಾಶವಿಲ್ಲ. ಇದೇ ವಿಷಯದ ಮೇಲೆ ತೇಜಸ್ವಿನಿ ರಮೇಶ್ ಗೌಡ ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ