ಬೆಂಗಳೂರು, ಜು.5- ಬಡ ರೋಗಿಗಳಿಗೆ ಹೃದಯ, ಮೂತ್ರಪಿಂಡ, ಯಕೃತ್ ಇತ್ಯಾದಿ ಅಂಗಾಂಗ ಕಸಿಗಾಗಿ 30 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಯ್ದಿರಿಸಿದ್ದಾರೆ.
ವಿಧಾನಸಭೆಯಲ್ಲಿಂದು ಬಜೆಟ್ ಮಂಡಿಸಿದ ಅವರು, ಬಡವರ ವೈದ್ಯಕೀಯ ವೆಚ್ಚದ ನೆರವಿಗೆ ಧಾವಿಸಲು ಪ್ರತ್ಯೇಕವಾಗಿ ಹಣ ಮೀಸಲಿಡುವ ಮೂಲಕ ಜನತಾದರ್ಶನದಲ್ಲಿ ತಾವು ಪಡೆದ ಅನುಭವಗಳನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.
108 ಮತ್ತು 104 ಆರೋಗ್ಯ ತುರ್ತು ಕರೆಗಳ ವೈದ್ಯಕೀಯ ಸಹಾಯವಾಣಿ ಗುಣಮಟ್ಟವನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ. ಸಹಾಯವಾಣಿ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು. ಲಭ್ಯತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ವ್ಯವಸ್ಥೆಯನ್ನು ಪುನರ್ ರೂಪಿಸಲಾಗುವುದು. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ ಹಾಗೂ ಮಾನಸಿಕ ಆರೋಗ್ಯ ರಕ್ಷಣಾ ಸೇವೆಗಳನ್ನು ಇದರಲ್ಲಿ ಸಂಯೋಜಿಸಲಾಗುವುದು ಎಂದಿದ್ದಾರೆ.
ಔಷಧ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು 40 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ ಎರಡು ವರ್ಷದಲ್ಲಿ ಇದನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ ಈ ವರ್ಷ 10 ಕೋಟಿ ರೂ. ಅನುದಾನ ನೀಡಲಾಗುತ್ತಿದೆ.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಮತ್ತು ಅಂಕಾಲಜಿ ಸೇವೆ ಒದಗಿಸುವ ಟ್ರಾಮಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಲವಾರು ಹೊಸ ಯೋಜನೆಗಳನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ, ರಾಮನಗರ ಜಿಲ್ಲೆ ಕನಕಪುರದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.
ರಾಮನಗರ ಶೀಘ್ರವಾಗಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಅಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 40 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವುದಾಗಿ ಹೇಳುವ ಮೂಲಕ ತವರು ಜಿಲ್ಲೆಗೆ ಮುಖ್ಯಮಂತ್ರಿಯವರು ಹೆಚ್ಚು ಒತ್ತು ನೀಡಿದ್ದಾರೆ.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಸ್ಪತ್ರೆಯನ್ನು 30 ಕೋಟಿ ರೂ. ವೆಚ್ಚದಲ್ಲಿ 800 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ಗೆ ಪ್ರತ್ಯೇಕ ಚಿಕಿತ್ಸಾ ಕೇಂದ್ರ ಸ್ಥಾಪಿಸಲು 12 ಕೋಟಿ ರೂ.ಗಳನ್ನು ನೀಡಿದ್ದಾರೆ.
ಬೆಳಗಾವಿ, ಕಲಬುರಗಿ, ಮೈಸೂರು ನಗರಗಳಲ್ಲಿ ಹೃದ್ರೋಗ ಮತ್ತು ಕ್ಯಾನ್ಸರ್ ರೋಗಗಳಿಗೆ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ.
ಗದಗ ಕೊಪ್ಪಳ ಮತ್ತುಹಾಸನ ನಗರಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ 400 ಹಾಸಿಗೆ ಸಾಮಥ್ರ್ಯದ ಹೊಸ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ 200 ಕೋಟಿ ರೂ. ಒದಗಿಸುವುದಾಗಿ ಬಜೆಟ್ನಲ್ಲಿ ಹೇಳಿದ್ದಾರೆ.