ಸಿದ್ದರಾಮಯ್ಯ ಘೋಷಣೆ ಮುಂದುವರಿಕೆ – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು, ಜು.5- ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಮಂಡಿಸಿದ್ದ ಬಜೆಟ್‍ನಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರೆಸುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಾಲ ಮನ್ನಾ ಹಾಗೂ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ಹಣಕಾಸು ಖಾತೆ ಹೊಂದಿರುವ ಕುಮಾರಸ್ವಾಮಿ ಅವರು ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಆರೋಗ್ಯ ಕರ್ನಾಟಕ, ಹೋಬಳಿಗೊಂದು ವಸತಿ ಶಾಲೆ, ಮಾತೃಪೂರ್ಣ, ಸೌರಶಕ್ತಿ ನೀತಿ, ನವೋದ್ಯಮ, ಮತ್ತಿತರ ಯೋಜನೆಗಳ ಪ್ರಗತಿ ಹಾಗೂ ಪರಿಣಾಮಗಳ ಬಗ್ಗೆ ಕೊಂಡಾಡಿದ್ದಾರೆ.
ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೈತ್ರಿ ಸರ್ಕಾರಗಳು ಅನಿವಾರ್ಯವಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಸೆಣಸಾಡಿದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವುದು ಪ್ರಜಾಪ್ರಭುತ್ವದ ಒಂದು ಸೊಬಗು.
ಸಮನ್ವಯ ಸಮಿತಿಯ ಆಶಯದಂತೆ 2 ಪಕ್ಷಗಳ ಪ್ರಣಾಳಿಕೆಗಳ ಪ್ರಮುಖ ಅಂಶಗಳನ್ನು ಆಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಅನುಷ್ಟಾನಗೊಳಿಸುತ್ತಿದ್ದೇವೆ ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರದ ಬಗ್ಗೆ ಜನ ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಅವುಗಳನ್ನು ಹುಸಿಗೊಳಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ರೈತರ ಸಾಲ ಮನ್ನಾ ಮತ್ತು ಆರನೇ ವೇತನ ಆಯೋಗದಂತೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯಕ್ಕಾಗುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಅದಕ್ಕಾಗಿ ವಿವಿಧ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಜೊತೆಗೆ ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತಿದ್ದೇವೆ. ಮುಖ್ಯಮಂತ್ರಿ ಸಚಿವಾಲಯದಿಂದಲೇ ಮಿತವ್ಯಯವನ್ನು ಆರಂಭಿಸಲಾಗಿದೆ. ಸಹೋದ್ಯೋಗಿ ಸಚಿವರು ಸಹ ಮಿತವ್ಯಯ ನಡೆಯನ್ನು ಅನುಸರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಹೊಸ ಕನಸುಗಳನ್ನು ಬಿತ್ತಿ ಬೆಳೆಯುವುದು ನಮ್ಮ ಬಯಕೆ ಯುವ ಸಮುದಾಯದಲ್ಲಿ ಚೈತನ್ಯ ತುಂಬಿಸುವುದು, ಮಹಿಳೆಯರ ಅಂಗಳದಲ್ಲಿ ತಂಗಾಳಿ ತರುವುದು, ರೈತಾಪಿ ಜನರ ಬದುಕಿನಲ್ಲಿ ನೆಮ್ಮದಿ ಮೂಡಿಸುವುದು ನಮ್ಮ ಸಂಕಲ್ಪ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ