ಬೆಂಗಳೂರು,ಜು.5- ಕೃಷಿಕರಿಗೆ ಬೆಂಬಲವಾಗಿರುವ ಸಣ್ಣ ನೀರಾವರಿ ಇಲಾಖೆ ಅಭಿವೃದ್ದಿಗೊಳಿಸಲು ಕಟಿಬದ್ಧವಾಗಿರುವ ಸರ್ಕಾರ ಹೇಮಾವತಿ ನದಿಯಿಂದ ಹಾಸನ ತಾಲ್ಲೂಕು ದುದ್ದ ಮತ್ತು ಶಾಂತಿ ಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆಗಳಿಗೆ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸುವ ಯೋಜನೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಇಂದು ತಾವು ಮಂಡಿಸಿದ ಬಜೆಟ್ನಲ್ಲಿ ಈ ವಿಷಯ ಪ್ರಕಟಿಸಿದ ಅವರು, ಮಂಡ್ಯ ಜಿಲ್ಲೆಯ ಲೋಕಪಾವನಿ ನದಿಯಿಂದ ದುದ್ದ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸಲು ಮಂಡ್ಯ ತಾಲ್ಲೂಕುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು 30 ಕೋಟಿ ರೂ.ಗಳ ಅನುದಾನದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಬೆಳಗಾವಿ, ಚಿಕ್ಕೋಡಿ ತಾಲ್ಲೂಕಿನ, ಹಿರೆಕೋಡಿ, ನಾಗವಾಳ, ನೇಜ ಇತ್ಯಾದಿ ಗ್ರಾಮಗಳ 10.225 ಹೆಕ್ಟೇರ್ ಪ್ರದೇಶದ ಜಮೀನುಗಳ ನೀರಾವರಿ ಸೌಲಭ್ಯಕ್ಕಾಗಿ 100 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.