ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂ

 

ಬೆಂಗಳೂರು, ಜು.5- ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ ಮಾಡಲು 150 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ತಾವು ಮಂಡಿಸಿದ ಚೊಚ್ಚಲ ಬಜೆಟ್‍ನಲ್ಲಿ ತಿಳಿಸಿದರು.
ಇಸ್ರೇಲ್‍ಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ನಡೆಸಿದ್ದು, ಅದೇ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಮೂಲಕ ಕೃಷಿಕರ ಬದುಕನ್ನು ಹಸನುಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಲಹಾ ಸಮಿತಿಯನ್ನು ರಚನೆ ಮಾಡಲು ಯೋಚನೆ ಮಾಡಿದ್ದು, ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡಿರುವ ಈ ಸಲಹಾ ಸಮಿತಿ ಜತೆ ನಾನು ಪ್ರತಿ 2 ತಿಂಗಳಿಗೊಮ್ಮೆ ಚರ್ಚೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಶೂನ್ಯ ಬಂಡವಾಳ , ಸಹಜ ಕೃಷಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ. ಇದು ನೆರೆಯ ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮದ ಇದಕ್ಕೆ ತಾಂತ್ರಿಕ ಸಹಾಯ ನೀಡಲು ಹಲವರು ಮುಂದೆ ಬಂದಿದ್ದಾರೆ. ಈ ಯೋಜನೆಗಾಗಿ 50 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ರೈತರ ಸಂಕಷ್ಟ ನಿವಾರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಚಿವರನ್ನೊಳಗೊಂಡ ಕೃಷಿ ಸಮನ್ವಯ ಉನ್ನತ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಬೀಜದಿಂದ ಮಾರುಕಟ್ಟೆವರೆಗೆ ಉಂಟಾಗಿರುವ ಪರಿಣಾಮಗಳ ಮೌಲ್ಯಮಾಪನ ಮಾಡುತ್ತದೆ ಎಂದು ತಿಳಿಸಿದರು.

ರೈತರನ್ನು ಸಂಘಟಿಸಲು ಅವರ ಉತ್ಪಾದಕತೆಯನ್ನೇ ಹೆಚ್ಚಿಸುವುದಲ್ಲದೆ ಅವರ ಸಂಘಟನೆ ಹಾಗೂ ಸಾಮಥ್ರ್ಯ ಬಲವರ್ಧನೆ ಮಾಡಲು ರಾಜ್ಯದ ರೈತ ಉತ್ಪಾದಕ ಸಂಸ್ಥೆ ನೀತಿಯನ್ನು ಜಾರಿಗೆ ತರಲಾಗುವುದು. ಸಿರಿ ಧಾನ್ಯ , ಬೇಳೆಕಾಳು, ಎಣ್ಣೆ ಕಾಳು, ಮುಸುಕಿನ ಜೋಳ ಇತ್ಯಾದಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ವಿಶೇಷ ಒತ್ತು ನೀಡಲಾಗುವುದು ಎಂದರು.

ಬೆಂಗಳೂರು ಮಹಾನಗರದ ಬೆಳ್ಳಂದೂರು , ಬೈರಮಂಗಲ ಕೆರೆಗಳ ನೀರು ಅತ್ಯಂತ ಕಲುಷಿತವಾಗಿದ್ದು , ನೊರೆ ಹಾರಾಡುತ್ತಿರುವುದರಿಂದ ಸೋಪು , ಡಿಟರ್ಜೆಂಟ್ ಇರುವ ನೀರು ಹರಿದು ಬೆಳ್ಳಂದೂರು ಕೆರೆಗೆ ಬರುತ್ತಿರುವುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಅಂಟುವಾಳ ಕಾಯಿ ಬೆಳೆಯಲು 10 ಕೋಟಿ ರೂ. ಮೀಸಲು: ಈ ಹಿಂದೆ ನಾವು ಮನೆ ಬಳಕೆಯ ಶುದ್ಧತೆಗಾಗಿ ಪ್ರಕೃತಿಯಲ್ಲಿ ಬೆಳೆಯುವ ಅಂಟು ಕಾಯಿಯನ್ನು ಬಳಸುತ್ತಿದ್ದೆವು.ಈಗ ಇದು ಮರೆಯಾಗಿ ಪರಿಸರಕ್ಕೆ ಹಾನಿಕಾರವಾದ ಪೌಡರ್, ಡಿಟರ್ಜೆಂಟ್‍ಗಳ ಬಳಕೆಗೆ ಬಂದಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮುಂದುವರೆದ ದೇಶಗಳಲ್ಲಿ ಪರಿಸರ ಸ್ನೇಹಿಯಾದ ಅಂಟುವಾಳದ ಡಿಶ್‍ವಾಶ್, ಸೋಪು, ವಾಶಿಂಗ್ ಮೆಷಿನ್ ಸೋಪುಗಳು ವ್ಯಾಪಕವಾಗಿ ಬಳಕೆಗೆ ಬಂದಿದೆ.
ಆದ್ದರಿಂದ ಅಂಟುವಾಳ ಕಾಯಿ ಆಧಾರಿತ ಸೋಪು ಹಾಗೂ ಡಿಟರ್ಜೆಂಟ್‍ಗಳ ಉತ್ಪಾದನೆಗೆ ಅನುಕೂಲವಾಗುವಂತೆ ಅಂಟುವಾಳ ಕಾಯಿ ಮರಗಳ ಬೇಸಾಯಕ್ಕಾಗಿ ಒಂದು ಕಾರ್ಯಕ್ರಮ ರೂಪಿಸುವ ಉದ್ದೇಶಕ್ಕಾಗಿ 10 ಕೋಟಿ ರೂ. ಮೀಸಲಿಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ