ಅಹಮದಾಬಾದ್, ಜು.3- ಜಿಎಸ್ಟಿ ಜಾರಿ, ನೋಟು ಅಮಾನೀಕರಣ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ವಿಫಲರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 125 ಕೋಟಿ ಭಾರತೀಯರ ಮೇಲೆ ಮಾರಕ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಎಂದು ದಲಿತ ಮುಖಂಡ ಜಿಗ್ನೇಶ್ ಮೇವಾನಿ ಆಪಾದಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ವಿರೋಧಿ ಸೈನಿಕರ ಮೇಲೆ ಕಳೆದ ಸೆಪ್ಟೆಂಬರ್ 2016ರಲ್ಲಿ ಭಾರತೀಯ ಯೋಧರು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾದ ಸುದ್ದಿ ಕುರಿತಂತೆ ಮೇವಾನಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಸೇನಾ ಯೋಧರು ಗಡಿಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗಿಂತ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಜಾರಿಗೆ ತಂದಿರುವ ಜಿಎಸ್ಟಿ ಹಾಗೂ ನೋಟು ಅಮಾನೀಕರಣ ಆ ದಾಳಿಗಿಂತ ಮಾರಕ ಎಂದು ಅವರು ಬಣ್ಣಿಸಿದ್ದಾರೆ. ಮೋದಿ ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಆಶ್ವಾಸನೆಗಳು ಇದುವರೆಗೂ ಈಡೇರಿಲ್ಲ. ಹೀಗಾಗಿ ಅವರು ರೈತರು ಮತ್ತು ಸಾಮಾನ್ಯ ನಾಗರಿಕರ ಮೇಲೆ ಮಾರಕ ದಾಳಿ ನಡೆಸಿದ್ದಾರೆ ಎಂದು ಅವರು ದೂರಿದರು.