ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ರೋಚಕ ಗೆಲುವು

ರೋಸ್ತೋನ್ (ಎಎನ್‍ಐ), ಜು.3- ಭಾರೀ ಕುತೂಹಲಭರಿತ ಪಂದ್ಯದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಮೊದಲರ್ಧದಲ್ಲಿ ಅಬ್ಬರಿಸಿದ್ದ ಜಪಾನ್ ಎಲ್ಲರನ್ನೂ ಹುಬ್ಬೇರುವಂತೆ ಮಾಡಿತ್ತು. ಅಂತಿಮ 8ರ ಹಂತಕ್ಕೆ ಲಗ್ಗೆ ಇಡುವ ಬಗ್ಗೆ ಆಗಲೇ ಎಲ್ಲರ ಬಾಯಲ್ಲಿ ಹರಿದಾಡುತ್ತಿತ್ತು. ಆದರೆ, ಧೃತಿಗೆಡದ ಬೆಲ್ಜಿಯಂ ಆಟಗಾರರ ಸಮಯೋಚಿತ ಆಟ ಗೆಲುವಿನ ಕೇಕೆ ಹಾಕುವಂತೆ ಮಾಡಿದೆ. ಫೀಫಾ ವಿಶ್ವಕಪ್‍ನ ನಾಕೌಟ್ ಪಂದ್ಯಗಳು ದಿನದಿಂದ ದಿನಕ್ಕೆ ಅಚ್ಚರಿಯ ಫಲಿತಾಂಶ ತರುತ್ತಿದ್ದು, ಎಲ್ಲರನ್ನೂ ಚಕಿತಗೊಳಿಸುತ್ತಿದೆ. ರಾತ್ರಿ (ಭಾರತೀಯ ಕಾಲಮಾನ) ಆರಂಭವಾದ ಪಂದ್ಯದಲ್ಲಿ ಮೊದಲು ಜಪಾನ್ ಚಮತ್ಕಾರಿ ಆಟ ಎಲ್ಲರನ್ನೂ ಮೆಚ್ಚಿಸಿತು. ಚೆಂಡಿನ ಮೇಲೆ ಹಿಡಿತ ಸಾಧಿಸಿ ಎದುರಾಳಿಗಳನ್ನು ನಿಬ್ಬೆರಗಾಗುವಂತೆ ಮಾಡಿತ್ತು. ಪ್ರೇಕ್ಷಕರು ಕೂಡ ಚಪ್ಪಾಳೆ ತಟ್ಟಿ ಆಟಗಾರರನ್ನು ಹುರಿದುಂಬಿಸುತ್ತಿದ್ದರು.
ಪಂದ್ಯದ 48ನೆ ನಿಮಿಷದಲ್ಲಿ ಯುವ ಆಟಗಾರ ಗೆಂಕಿ ಹ್ಯಾರ್‍ಗುಡಿ ಬೆಲ್ಜಿಯಂನ ಡಿಫೆನ್ಸ್ ಆಟಗಾರರನ್ನು ವಂಚಿಸಿ ಗೋಲು ಬಾರಿಸುತ್ತಿದ್ದಂತೆ ಜಪಾನ್ ಪಾಳಯದಲ್ಲಿ ಸಂಭ್ರಮ ಮುಗಿಲುಮುಟ್ಟಿತು. ಇದಾದ ಕೆಲವೇ (52)ನಿಮಿಷಗಳಲ್ಲಿ ಭಾರೀ ಗಮನ ಸೆಳೆದಿರುವ ಮುಂಚೂಣಿ ಆಟಗಾರ ಟಿಕಾಶಿ ಇನ್ಯಾಯಿ ಕೂಡ ಗೋಲು ಬಾರಿಸುತ್ತಿದ್ದಂತೆ ಜಪಾನ್ 2-0 ಮುನ್ನಡೆ ಪಡೆದು ಖುಷಿಯಲ್ಲಿ ತೇಲಾಡಿತು. ಏನಾಗುತ್ತಿದೆ ಎಂಬುದನ್ನು ತಿಳಿಯದಂತಾಗಿದ್ದ ಬೆಲ್ಜಿಯಂ ನಂತರ ಆಡಿದ ಆಟವೇ ಒಂದು ಪವಾಡ.
ಧೃತಿಗೆಡದೆ ಸಮಾಧಾನಕರ ಹಾಗೂ ಸಮಯೋಚಿತ ಆಟಕ್ಕೆ ಮುಂದಾಗಿ ಚೆಂಡನ್ನು ತನ್ನ ಹಿಡಿತಕ್ಕೆ ಪಡೆದು ಜಪಾನ್ ಮೇಲೆ ಒತ್ತಡ ಹೇರಲು ಪ್ರಾರಂಭಿಸಿತು. ಅದಕ್ಕೆ ಫಲ ಎನ್ನುವಂತೆ ಬೆಲ್ಜಿಯಂನ ಫಾರ್ವರ್ಡ್ ಆಟಗಾರ ಜಾನ್ ವೆಂಟೋಗ್ಹೆನ್ ಅದ್ಬುತ ಕಿಕ್ ಮೂಲಕ ಗೋಲು ಬಾರಿಸಿ ಭರವಸೆ ಮೂಡಿಸಿದರು. ಪಂದ್ಯ ಮುಗಿಸಲು ಇನ್ನು ಕೇವಲ 20 ನಿಮಿಷಗಳು ಬಾಕಿ ಉಳಿದಿದೆ ಎನ್ನುವಷ್ಟರಲ್ಲೇ ಮತ್ತೆ ಬೆಲ್ಜಿಯಂನ ಮಿಡ್‍ಫೀಲ್ಡರ್ ಮರವೋನ್ ಫಾಲೋನಿಯಾ (74ನೆ ನಿಮಿಷ) ಜಪಾನ್ ಗೋಲ್‍ಕೀಪರ್‍ನನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಿದರು. ಉಭಯ ತಂಡಗಳು ತಲಾ 2-2 ಗೋಲುಗಳನ್ನು ಗಳಿಸಿ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿತು. ನಿಗದಿತ 90 ನಿಮಿಷ ಮುಗಿದ ನಂತರ ಎಕ್ಟ್ರಟ್ರಾ ಟೈಮ್ (ನಿರ್ದಿಷ್ಟ ಫಲಿತಾಂಶಕ್ಕಾಗಿ) ಆಟ ರೋಚಕವಾಗಿತ್ತು.ಎರಡೂ ತಂಡಗಳ ಆಟಗಾರರು ಯಾವುದೇ ತಪ್ಪಿಗೆ ಸಿಗದೆ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸುತ್ತಿದ್ದರು. ಆದರೆ, 94ನೆ ನಿಮಿಷದಲ್ಲಿ ಆಗಿದ್ದೇ ಪವಾಡ. ಬೆಲ್ಜಿಯಂನ ನಾಸಿರ್ ಚಾಡಿ ಅವರ ಅದ್ಭುತ ಗೋಲ್ ತಂಡದ ಅದೃಷ್ಟವನ್ನೇ ಬದಲಿಸಿತು. ಜಪಾನ್ ಮೇಲೆ ನಿರಾಸೆಯ ಕಾರ್ಮೋಡ ಆವರಿಸಿತು. ಮುನ್ನಡೆಯೊಂದಿಗೆ ಬೆಲ್ಜಿಯಂ ಆಟಗಾರರು ಎಚ್ಚೆತ್ತುಕೊಂಡು ಗೆಲುವನ್ನು ಪಕ್ಕಾ ಮಾಡಿಕೊಂಡರು. ಆರಂಭದಲ್ಲಿ ಎಡವಿದರೂ ಕೊನೆಯಲ್ಲಿ ಮಿಂಚಿದ ಬೆಲ್ಜಿಯಂ ಆಟಗಾರರ ಚಮತ್ಕಾರಿ ನಡೆಯನ್ನು ಫುಟ್‍ಬಾಲ್ ಪ್ರಿಯರು ಕೊಂಡಾಡಿದರು. ಅದೃಷ್ಟ ಕೈಕೊಟ್ಟು ಕೊನೆಯಲ್ಲಿ ಗೆಲುವನ್ನು ಕಳೆದುಕೊಂಡ ಜಪಾನ್ ಆಟಗಾರರು ನಿರಾಸೆಯಿಂದಲೇ ಮೈದಾನವನ್ನು ಬಿಟ್ಟರು. ಈಗಾಗಲೇ ಅಂತಿಮ 8ರ ಹಂತಕ್ಕೆ ತಲುಪಿರುವ ರಷ್ಯಾ, ಕ್ರುವೇಷಿಯಾ, ಬ್ರೆಜಿಲ್ ಸಾಲಿಗೆ ಈಗ ಬೆಲ್ಜಿಯಂ ಕೂಡ ತಲುಪಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ