ಹೊಸದಿಲ್ಲಿ: ಜುಲೈ 1ರಂದು ನಡೆದಿದ್ದ ದೆಹಲಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ.
ಮನೆಯಲ್ಲಿ 11 ಕಿಟಕಿಗಳು, 11 ಪೈಪುಗಳು ಸಿಕ್ಕಿದ್ದು 11 ಮಂದಿಯ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ತನಿಖೆ ವೇಳೆ ಮನೆಯಲ್ಲಿ ಸಿಕ್ಕ ಚೀಟಿಯ ಪ್ರಕಾರ ಮೃತ 11 ಮಂದಿಯು 10 ಕ್ರಮಗಳನ್ನು ಅನುಸರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಇವರ ಮನೆಯಲ್ಲಿ ಬಾಗಿಲುಗಳು ಸಹ 11 ಕಬ್ಬಿಣದ ರಾಡ್ಗಳನ್ನು ಒಳಗೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮನೆಯ ಪೈಪ್ಗಳು ಹಾಗೆಯೇ ಯಾರು ಬಿಡುವುದಿಲ್ಲ. ಬಿಟ್ಟರೂ ಒಂದು ಮೂರು ನಾಲ್ಕು ಪೈಪ್ ಗಳನ್ನು ಬಿಡುವುದಿಲ್ಲ. ಆದರೆ ಗೋಡೆಯಲ್ಲಿ 11 ಪೈಪ್ಗಳು ಕಂಡುಬಂದಿದ್ದು, ಈ ಪೈಪ್ಗಳಿಗೆ ಹೊರಗಡೆಯಿಂದ ಯಾವುದೇ ಸಂಪರ್ಕ ಇಲ್ಲ. ಅಷ್ಟೇ ಅಲ್ಲದೇ ಒಂದೊಂದು ಪೈಪ್ ಗಳ ಗಾತ್ರ ಸಹ ಭಿನ್ನವಾಗಿದೆ. ಯಾಕೆ ಈ ರೀತಿಯಾಗಿ 11 ಪೈಪ್ ಗಳನ್ನು ಹಾಗೆಯೇ ಬಿಟ್ಟಿದ್ದಾರೆ ಎನ್ನುವುದು ನಿಗೂಢವಾಗಿದೆ.
11 ಮಂದಿಯೂ ಆಧ್ಯಾತ್ಯದ ಮೊರೆ ಹೋಗಿ ಮೋಕ್ಷ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಆತ್ಮಹತ್ಯೆಗೆ ಪ್ರೇರೇಪಿಸಿದ ಗುರುಗಳ ಸುಳಿವು ಸಿಕ್ಕಿದ್ದು, ಅಧ್ಯಾತ್ಮಿಕ ಗುರುವಾದ ಜಾನೆಗಡಿ ಎಂದು ತಿಳಿದು ಬಂದಿದೆ. ಆಧ್ಯಾತ್ಮಿಕ ಗುರುಗಳಾದ ಜಾನೆಗಡಿಯನ್ನು ವಿಚಾರಣೆಗೆ ಒಳಪಡಿಸಿದರೆ ಪ್ರಕರಣದ ಸತ್ಯ ಹೊರಬೀಳಬಹುದು. ಹೀಗಾಗಿ ಜಾನೆಗಡಿ ಪತ್ತೆ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.
ಅಕ್ಕಪಕ್ಕದವರ ಹೇಳಿಕೆಯ ಪ್ರಕಾರ ಕುಟುಂಬವು ಆತ್ಮಹತ್ಯೆಗೂ ಮುಂಚೆ ಪ್ರಿಯಾಂಕ ಎಂಬವರ ಮದುವೆಗೆ ತಯಾರು ಮಾಡಿಕೊಳ್ಳುತ್ತಿದ್ದರು. ಭಾನುವಾರ ತಮ್ಮ ದಿನಸಿ ಅಂಗಡಿಯನ್ನು ಸುಮಾರು 11.45ಕ್ಕೆ ಮುಚ್ಚಿದ್ದಾರೆ. ನಂತರ ಅವರ ಮನೆಗೆ 10.40ಕ್ಕೆ ಫುಡ್ ಡೆಲಿವರಿ ಮಾಡುವ ವ್ಯಕ್ತಿ ಮಾತ್ರ ಬಂದಿದ್ದ ಎಂದು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಕಿಟಕಿ ಮೂಲಕ ನೋಡಿದಾಗ ಮನೆಯ ಎಲ್ಲಾ ಸದಸ್ಯರು ನೇಣುಹಾಕಿಕೊಂಡು ಮೃತಪಟ್ಟಿರುವುದು ತಿಳಿದು ಬಂದಿತ್ತು. ಅವರು ಮನೆಯ ಎಲ್ಲಾ ಕಿಟಕಿ, ಬಾಗಿಲುಗಳನ್ನು ತೆರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ತಾವು ಸಾಕಿದ್ದ ನಾಯಿಗೆ ಯಾವುದೇ ತೊಂದರೆ ಕೊಡದೆ, ಅದನ್ನು ಮನೆಯ ಮೇಲೆ ಕಟ್ಟಿಹಾಕಿದ್ದಾರೆ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಮೃತರು ಒತ್ತಡಕ್ಕೊಳಗಾಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಕುಟುಂಬದ ನಾರಾಯಣ ದೇವಿ ಎಂಬ ವೃದ್ಧೆ ನೆಲದ ಮೇಲೆಯೇ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ಬೆರಳಚ್ಚು ತಜ್ಞರ ವರದಿಯ ಪ್ರಕಾರ ಅವರು ಬೆಲ್ಟ್ ಸಹಾಯದಿಂದ ಸ್ವತಃ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.