ಮೇರಿಲ್ಯಾಂಡ್: ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಅಮೆರಿಕ ಶಸ್ತ್ರಧಾರಿಯ ದಿಢೀರ್ ದಾಳಿಯಿಂದಾಗಿ ಬೆಚ್ಚಿಬಿದ್ದಿದ್ದು, ಪತ್ರಿಕಾ ಸಂಸ್ಥೆಯ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಪತ್ರಿಕಾ ಸಂಸ್ಥೆಯ ಐವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಮೆರಿಕದ ಮೇರಿಲ್ಯಾಂಡ್ ರಾಜಧಾನಿ ಅನ್ನಾಪೋಲಿಸ್ ನ ಗೆಜೆಟ್ ಪತ್ರಿಕಾ ಕಚೇರಿ ಮೇಲೆ ಶಸ್ತ್ರಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಕಚೇರಿಯಲ್ಲಿದ್ದ ಐವರು ಸಿಬ್ಬಂದಿ ಗುಂಡೇಟಿನಿಂದ ಸಾವಿಗೀಡಾಗಿದ್ದಾರೆ.
ವಿಚಾರ ತಿಳಿದ ಕೂಡಲೇ ಅನ್ನಾಪೋಲಿಸ್ ನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು 2 ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ದಾಳಿಕೋರನನ್ನು ಬಂಧಿಸಿದ್ದಾರೆ. ಪ್ರಸ್ತುಚ ಕಚೇರಿಯನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಕಟ್ಟಡವನ್ನು ತೀವ್ರ ಶೋಧಕ್ಕೆ ಒಳಪಡಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಸತ್ತವರ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಹಿಂದೆ ಇಸಿಸ್ ಉಗ್ರಗಾಮಿಗಳು ಚಾರ್ಲಿಹೆಬ್ಡೋ ವ್ಯಂಗ್ಯಚಿತ್ರ ವಿರೋಧಿಸಿ ಫ್ರಾನ್ಸ್ ಕಚೇರಿ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಹಲವರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.