ಕಝಾನ್ ಅರೇನಾ, ಜೂ.28-ಕ್ರೀಡಾ ಫಲಿತಾಂಶದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದಕ್ಕೆ ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಸಾಕ್ಷಿಯಾಗಿದೆ. ವಿಶ್ವ ಚಾಂಪಿಯನ್ ಜರ್ಮನ್ ಹೀನಾಯ ಸೋಲಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿದ್ದು ಸ್ಪಷ್ಟ ನಿದರ್ಶನವಾಗಿದೆ.
ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ವಿಕ್ರಮ ಸಾಧಿಸಿದ್ದ ಹಾಲಿ ಚಾಂಪಿಯನ್ ಜರ್ಮನಿಗೆ ನಾಕೌಟ್ ಹಂತ ಕೂಡ ಪ್ರವೇಶಿಸಲು ಅಸಾಧ್ಯವಾಗಿರುವುದು ದೊಡ್ಡ ದುರಂತವೇ ಸರಿ. ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಬಾರದು ಎಂಬುದಕ್ಕೆ ಈ ಫಲಿತಾಂಶ ಉತ್ತಮ ಉದಾಹರಣೆಯೂ ಆಗಿದೆ.
ಎಫ್ ಗುಂಪಿನ ಪಂದ್ಯಾವಳಿಯಲ್ಲಿ ದಕ್ಷಿಣ ಕೊರಿಯಾ ಬಲಿಷ್ಠ ಜರ್ಮನಿ ತಂಡವನ್ನು 2-0 ಗೋಲುಗಳಿಂದ ಮಣಿಸಿದೆ. ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನೆಸಿದ್ದ ಜರ್ಮನಿ ಭಾರೀ ಮರ್ಮಾಘಾತದೊಂದಿಗೆ 16ರ ಘಟ್ಟವನ್ನೂ ಪ್ರವೇಶಿಸಿಲು ಸಾಧ್ಯವಾಗದೇ ಟೂರ್ನಿಯಿಂದ ಹೊರಬಿದ್ದಿದೆ.
ಈ ಭಾರೀ ಮುಖಭಂಗದ ಫಲಿತಾಂಶದೊಂದಿಗೆ ಜರ್ಮನಿಯಲ್ಲಿ ಸೂತಕದ ಛಾಯ ಆವರಿಸಿದೆ. ಈ ಹೀನಾಯ ಸೋಲನ್ನು ನಂಬದಂತಾಗಿರುವ ಅಭಿಮಾನಿಗಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಆಘಾತದಿಂದ ಹೊರ ಬರಲು ದೀರ್ಘ ಸಮಯವೇ ಬೇಕು. ಜರ್ಮನಿಯ ಕ್ರೀಡಾಭಿಮಾನಿಗಳು ಅಕ್ಷರಶಃ ದುಃಖತಪ್ತರಾಗಿದ್ದಾರೆ.
ಕೊನೆ ಕ್ಷಣದ ರೋಚಕ ತಿರುವು: ಪಂದ್ಯದ ಕಡೆ ಕ್ಷಣದಲ್ಲಿ ಗೋಲುಗಳನ್ನು ಗಳಿಸಿಕೊಳ್ಳುವ ಮೂಲಕ ಕೊರಿಯನ್ನರು, ವಿಶ್ವ ಚಾಂಪಿಯನ್ನರಿಗೆ ಸೋಲಿನ ರುಚಿ ತೋರಿಸಿದರು.
ಜರ್ಮನಿಗೆ ಮುಳುವಾದ ಕಳಪೆ ಪ್ರದರ್ಶನ: ಪಂದ್ಯದುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ ಜರ್ಮನಿ ಆಟಗಾರರು ತಮಗೆ ಲಭಿಸಿದ ಅದ್ಭುತ ಅವಕಾಶಗಳನ್ನು ಕೈ ಚೆಲ್ಲಿದ್ದರು. ಆದರೆ ಕೊರಿಯನ್ನರು ಕೊನೆ ಕ್ಷಣಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ಉತ್ತಮ ಸಾಧನೆಯೊಂದಿಗೆ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದರು.
ಕೊರಿಯಾದ ಕಿಮ್ ಯೊಂಗ್ ಗೊನ್(90+2) ಹಾಗೂ ಸೋನ್ ಹ್ಯೂಂಗ್ ವಿನ್(90+6) ತಲಾ ಒಂದೊಂದು ಗೋಲುಗಳನ್ನು ಗಳಿಸಿ ಜರ್ಮನಿ ಬೆಚ್ಚಿ ಬೀಳುವಂತೆ ಮಾಡಿದರು.
ಪ್ರಬಲ ಜರ್ಮನಿ ನಂಬರ್ ಒನ್ ಶ್ರೇಯಾಂಕದೊಂದಿಗೆ ಫಿಫಾ ವಿಶ್ವಕಪ್ ಸರಣಿಯನ್ನು ಪ್ರವೇಶಿಸಿ ತನ್ನ ಮೊದಲ ಪಂದ್ಯದಲ್ಲೇ ಮೆಕ್ಸಿಕೋ ವಿರುದ್ಧ ಸೋತಿತ್ತು. ಎರಡನೇ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಜಯಸಾಧಿಸಿದ್ದ ಜರ್ಮನಿ ನಿರ್ಣಾಯಕವಾಗಿದ್ದ ಮೂರನೇ ಪಂದ್ಯದಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿ ಟೂರ್ನಿಯಿಂದ ಔಟ್ ಆಗಿದೆ.