ಕೊನೆ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್, ಸರ್ಬಿಯಾ ವಿರುದ್ದ 2-0 ಗೋಲುಗಳಿಂದ ಭರ್ಜರಿ ಗೆಲುವು

ಮಾಸ್ಕೋ, ಜೂ.28-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಕೊನೆ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್, ಸರ್ಬಿಯಾ ವಿರುದ್ದ 2-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿ ನಾಕೌಟ್ ಹಂತ ಪ್ರವೇಶಿಸಿದೆ. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಬ್ರೆಜಿಲ್ ಇ ಗುಂಪಿನ ಪಂದ್ಯದ ಆರಂಭದಿಂದಲೂ ಸರ್ಬಿಯಾ ವಿರುದ್ಧ ಹತೋಟಿ ಸಾಧಿಸಿತು. ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿದ ಬಲಿಷ್ಠ ಬ್ರೆಜಿಲಿಯನ್ನರ ಪರವಾಗಿ 36ನೇ ನಿಮಿಷದಲ್ಲಿ ಪೌಲಿನ್ಹೋ ಮೊದಲ ಗೋಲು ಬಾರಿಸಿದರು. ಪ್ರಥಮಾರ್ಧವನ್ನು 1-0 ಮುನ್ನಡೆಯೊಂದಿಗೆ ಮುಕ್ತಾಯಗೊಳಿಸಿದ ಬ್ರೆಜಿಲ್ ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮೆರೆದರೂ ಸರ್ಬಿಯನ್ನರಿಂದ ಭಾರೀ ಪೈಪೆÇೀಟಿ ಎದುರಿಸಿತು. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿರುವ ಬ್ರೆಜಿಲ್ ಮೇಲೆ ಸರ್ಬಿಯಾ ಭಾರಿ ಒತ್ತಡ ಹೇರಿ ಪ್ರತಿಸ್ಪರ್ಧೆ ಒಡ್ಡಿತು. ಆದರೆ 68ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಸ್ಟಾರ್ ಆಟಗಾರ ನೇಮರ್ ನೀಡಿದ ಪಾಸನ್ನು ನಾಯಕ ಥಿಯಾಗೋ ಸಿಲ್ವ ಹೆಡ್ಡರ್ ಮೂಲಕ ಸೊಗಸಾಗಿ ಚೆಂಡನ್ನು ಗೋಲ್ ಬಾಕ್ಸ್‍ಗೆ ಸೇರಿಸಿದರು. ಈ ಗೋಲಿನೊಂದಿಗೆ ಬ್ರೆಜಿಲ್ 2-0 ಗೋಲುಗಳ ಮುನ್ನಡೆ ಸಾಧಿಸಿತು.
ಅಂತಿಮ 20 ನಿಮಿಷಗಳಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ಬ್ರೆಜಿಲ್ ಒಂದೇ ಒಂದು ಗೋಲು ಬಾರಿಸಲು ಸರ್ಬಿಯಾಗೆ ಅವಕಾಶ ನೀಡದೇ ಗೆಲುವು ಸಾಧಿಸಿ 16ರ ಘಟ್ಟ ಪ್ರವೇಶಿಸಿತು.
ಬ್ರೆಜಿಲ್ ವಿರುದ್ಧ ಜಯ ಸಾಧಿಸಿದರೆ ಸರ್ಬಿಯಾ ನಾಕೌಟ್ ಹಂತಕ್ಕೇರುವ ಅವಕಾಶ ಇತ್ತು. ಪ್ರಿ ಕ್ವಾರ್ಟರ್ ಪ್ರವೇಶಿಸಿರುವ ಬ್ರೆಜಿಲ್ ಮತ್ತೊಂದು ಬಲಿಷ್ಠ ತಂಡ ಮೆಕ್ಸಿಕೋವನ್ನು ಎದುರಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ