ಜಮಖಂಡಿ, ಫೆ.25- ನುಡಿದಂತೆ ನಡೆಯದ ತಮಗೆ ಬಸವಣ್ಣನವರ ಹೆಸರೇಳುವ ಯಾವ ನೈತಿಕತೆಯೂ ಇಲ್ಲ. ಮೊದಲು ತಾವು ಭರವಸೆ ನೀಡಿದಂತೆ ಯುವಕರಿಗೆ 2ಕೋಟಿ ಉದ್ಯೋಗ ನೀಡಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ಹಾಕಿ. ನಂತರ ಬಸವಣ್ಣನವರ ಹೆಸರು ಪ್ರಸ್ತಾಪ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಟಾಂಗ್ ನೀಡಿದರು.
ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿ ಗ್ರಾಮದಲ್ಲಿ ಕಿರು ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಸವಣ್ಣನವರ ಅನುಭವ ಮಂಟಪದ ಮೊದಲ ಪರಿಕಲ್ಪನೆಯೇ ಸಂಸತ್, ಸಂವಿಧಾನವೂ ಕೂಡ ಬಸಣ್ಣನವರ ಆಶಯಗಳಂತೆ ರಚನೆಯಾಗಿದೆ. ಕಾಯಕತತ್ವ, ನುಡಿದಂತೆ ನಡೆಯಬೇಕು. ಆದರೆ, ಪ್ರಧಾನಿ ಮೋದಿ ಅವರು ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಶ್ರೀಮಂತರ ಪರವಾಗಿರುವ ಅವರು, ಬಡವರು, ಆದಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದರು.
ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಬಡ, ಮಧ್ಯಮವರ್ಗದ ಜನ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರತಿ ಸಾಲಿನಲ್ಲಿ ನಿಂತು ಬ್ಯಾಂಕುಗಳಿಗೆ ಜಮೆ ಮಾಡಿದರು, ಆದರೆ, ಲಲಿತ್‍ಮೋದಿ, ನೀರವ್‍ಮೋದಿ ಅದನ್ನೆಲ್ಲಾ ಕೊಂಡು ದೇಶಬಿಟ್ಟು ಪರಾರಿಯಾದರು. ಶ್ರೀಮಂತರ 1.40 ಲಕ್ಷ ಕೋಟಿ ಸಾಲಮನ್ನಾ ಮಾಡುವ ಪ್ರಧಾನಿ ಮೋದಿ ಅವರು, ಅಮಾಯಕ ರೈತರ ಸಾಲ ಮನ್ನಾ ಮಾಡಲಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ, ಅದನ್ನು ನೆರವೇರಿಸದೆ ಮಾತು ತಪ್ಪಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರ ನುಡಿದಂತೆ ನಡೆದಿದೆ. 55 ಸಾವಿರ ಕೋಟಿ ರೂ. ನೀರಾವರಿಗೆ ಖರ್ಚು ಮಾಡಿದೆ. ಪ್ರತಿ ಬಡವರಿಗೆ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಕೆಲವೇ ಶ್ರೀಮಂತರ ಪರವಾಗಿ ಕೇಂದ್ರದ ಬಿಜೆಪಿ ಸರ್ಕಾರ ನಿಂತಿದೆ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಎಲ್ಲರನ್ನು ಒಂದೇ ಹಾದಿಯಲ್ಲಿ ಕೊಂಡೊಯ್ಯುತ್ತಿದೆ. ಜಾತಿ, ಧರ್ಮ, ಶ್ರೀಮಂತಿಕೆ ನೋಡದೆ, ತಾರತಮ್ಯ ಮಾಡದೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೇವೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ರೈತರ 8600 ಕೋಟಿ ರೂ. ಸಾಲ ಮನ್ನಾ ಮಾಡಿದೆ. 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಿದೆ. ಎಸ್ಸಿ, ಎಸ್ಟಿ, ಹಿಂದುಳಿದ, ದುರ್ಬಲ ವರ್ಗದವರಿಗೆ ಶಕ್ತಿ ನೀಡುವ ಕೆಲಸವನ್ನು ಮಾಡಿದೆ. 27 ಸಾವಿರ ಕೋಟಿ ರೂ. ಅನುದಾನವನ್ನು ನೀಡಿದೆ. ಆದರೆ, ಪ್ರಧಾನಿಯವರು ಇಡೀ ದೇಶದ ದಲಿತರ ಆದಿವಾಸಿಗಳ ಅಭಿವೃದ್ಧಿಗೆ ಕೇವಲ 55 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ಅಂಕಿ-ಅಂಶಗಳ ವಿವರವನ್ನು ನೀಡಿದರು.
ಗುಜರಾತ್‍ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಅಲ್ಲಿ ಆರೋಗ್ಯ, ಶಿಕ್ಷಣ ದುಬಾರಿಯಾಗಿದೆ. ಪದವಿ, ಸ್ನಾತಕೋತ್ತರ ಪದವಿ ಪಡೆಯಲು 15 ಲಕ್ಷ ರೂ.ಗಳವರೆಗೆ ಖರ್ಚು ಮಾಡಬೇಕು. ಅದೇ ರೀತಿ ಆಪರೇಷನ್‍ಗೆ 5ರಿಂದ 10 ಲಕ್ಷಗಳವರೆಗೆ ವ್ಯಯಿಸಬೇಕು. ಆದರೆ, ಕರ್ನಾಟಕ ಸರ್ಕಾರ ಉಚಿತವಾಗಿ ಶಿಕ್ಷಣ, ಆರೋಗ್ಯವನ್ನು ನೀಡುತ್ತಿದೆ ಎಂದು ತಿಳಿಸಿದರು.
ಗುಜರಾತ್‍ನಲ್ಲಿ ಕೇವಲ ಒಬ್ಬ ಉದ್ಯಮಿಗೆ 45 ಸಾವಿರ ಎಕರೆ ಭೂಮಿಯನ್ನು ಅಲ್ಲಿನ ಬಿಜೆಪಿ ಸರ್ಕಾರ ಉಚಿತವಾಗಿ ನೀಡಿದೆ. ಬಿಜೆಪಿ ಶ್ರೀಮಂತರ ಪರವಾಗಿದ್ದರೆ, ಕಾಂಗ್ರೆಸ್ ಬಡವರಿಗೆ ಅನ್ನಕೊಡುವ ಕೆಲಸವನ್ನು ಮಾಡುತ್ತಿದೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.
ತಮ್ಮ ಸಂಪುಟದ ಸಹೋದ್ಯೋಗಿಗಳಾದ ಅರುಣ್‍ಜೇಟ್ಲಿ, ಸುಷ್ಮಾಸ್ವರಾಜ್ ಸೇರಿದಂತೆ ಯಾರೂ ಮಾಡಿದ ಕೆಲಸವನ್ನು ತಾವು ಹೇಳುವುದಿಲ್ಲ. ಎಲ್ಲವನ್ನೂ ಒಬ್ಬರೇ ಮಾಡಿದಂತೆ ಹೇಳುತ್ತೀರಾ. ಬಸವಣ್ಣನವರು ಹೇಳಿದಂತೆ ಆತ್ಮರತಿ ಕೂಡ ಅಪರಾಧವೇ. ದೇಶ ಕಟ್ಟುವ ಕೆಲಸದಲ್ಲಿ ತಮ್ಮ ಜತೆ ನಾವೂ ಸೇರುತ್ತೇವೆ. ಎಲ್ಲವನ್ನೂ ತಾವೊಬ್ಬರೇ ಎಂದು ಬಿಂಬಿಸಿಕೊಳ್ಳಲು ಹೋಗಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಪಡಸಲಗಿಯಲ್ಲಿ ಅಲ್ಲಿನ ರೈತರೇ ಸೇರಿ ಶ್ರಮವಹಿಸಿ ಬ್ಯಾರೇಜ್ ನಿರ್ಮಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ. ಇಲ್ಲಿನ ರೈತರು ಕೂಡ ನುಡಿದಂತೆ ನಡೆದು ತೋರಿಸಿದ್ದಾರೆ. ಕಾಯಕ ತತ್ವವನ್ನು ಪಾಲಿಸಿದ್ದಾರೆ ಎಂದು ಪ್ರಶಂಸಿಸಿದರು.
ಪ್ರಧಾನಿ ಮೋದಿ ಅವರು ಇಲ್ಲಿಗೆ ಬಂದಾಗ ಭ್ರಷ್ಟಾಚಾರದ ಬಗ್ಗೆ ಭಾರೀ ಭಾಷಣ ಮಾಡುತ್ತಾರೆ. ಆದರೆ, ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿ, ಸಚಿವರನ್ನು ತಮ್ಮ ಅಕ್ಕಪಕ್ಕ ಕೂರಿಸಿಕೊಂಡಿರುವುದನ್ನು ಮರೆತಿರುತ್ತಾರೆ. ದೇಶದ ರಕ್ಷಕನಾಗಿ ಕೆಲಸ ಮಾಡುತ್ತೀನಿ ಎಂದು ಹೇಳಿದ ಮೋದಿ ಜಿ ಅವರಿಗೆ ಉದ್ಯಮಿಗಳು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿಕೊಂಡು ಹೋಗಿದ್ದು, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಗ ಜೈಶಾ ಹಣ ನೂರಾರು ಪಟ್ಟು ಹೆಚ್ಚಾಗಿದ್ದು, ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಉಸ್ತುವಾರಿ ವೇಣುಗೋಪಾಲ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಶಾಸಕರಾದ ಐ.ಜಿ.ಸನದಿ, ಸಿದ್ದುನ್ಯಾಮೆಗೌಡ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.