ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಯೇ ಇಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ, ಫೆ.25- ಸ್ವತಂತ್ರ ಭಾರತದ ನಂತರ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿ ಗ್ರಾಮದಲ್ಲಿ ಕಿರು ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳುತ್ತಿಲ್ಲ. ಬರಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅಚ್ಚೇದಿನ್ ಆಯೇಗ ಎಂದು ಹೇಳಿದರು. ಆದರೆ, ಒಳ್ಳೆಯ ದಿನಗಳು ಯಾರಿಗೆ ಬಂದವೊ ಗೊತ್ತಿಲ್ಲ. ನೀರವ್ ಮೋದಿ, ವಿಜಯ್‍ಮಲ್ಯ, ಲಲಿತ್ ಮೋದಿ ಅಂಥವರು ಲೂಟಿ ಮಾಡಿ ದೇಶ ಬಿಟ್ಟು ಹೋಗಲು ಮೋದಿ ಅವರ ಸಹಕಾರ ಇದ್ದೇ ಇದೆ. ಯುವಕರು, ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು, ರೈತರು ಸೇರಿದಂತೆ ಯಾರ ಸಮಸ್ಯೆಗಳ ಬಗ್ಗೆಯೂ ಚಕಾರ ಎತ್ತದ ಮೋದಿ ಪ್ರತಿಬಾರಿಯೂ ಸಬ್‍ಕಸಾಥ್ ಸಬ್‍ಕ ವಿಕಾಸ್ ಎಂದು ಹೇಳುತ್ತಾರೆ. ಶೋಷಿತರನ್ನು ಬಿಟ್ಟು ಎಲ್ಲರ ವಿಕಾಸವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಎಲ್ಲಿಯೂ ನೋಡಿಲ್ಲ. ಅಕ್ಕಪಕ್ಕ ಜೈಲಿಗೆ ಹೋದವರು ಮತ್ತಿತರರನ್ನು ಕೂರಿಸಿಕೊಂಡು ನಮ್ಮ ಸರ್ಕಾರವನ್ನು ಭ್ರಷ್ಟಾಚಾರ ಸರ್ಕಾರ ಎಂದು ಹೇಳುತ್ತಾರೆ. ರೈತರ ಸಾಲ ಮನ್ನಾ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಚಪ್ಪಯ್ಯ ಎನ್ನದ ಮೋದಿ ಅವರು ಈಗ ರೈತರ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಬೇಕೆಂದು ನಾವು ಒತ್ತಾಯಿಸಿದ್ದೆವು. ಆಗ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ನಾವು ನೋಟು ಮುದ್ರಿಸುವ ಮಿಷಿನ್ ಇಟ್ಟಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಕೇಂದ್ರದಲ್ಲಿ ಮೋದಿ ಅವರು ರೈತರ ಸಾಲ ಮನ್ನಾ ಮಾಡಲು ಒಪ್ಪಿಲ್ಲ. ಇಂಥ ರೈತ ವಿರೋಧಿಗಳು ಮುಂದೆ ಅಧಿಕಾರಕ್ಕೆ ಬರಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕರ್ನಾಟಕ ಸರ್ಕಾರವನ್ನು ಭ್ರಷ್ಟ ಸರ್ಕಾರವೆಂದು ಹೇಳಿವ ಮೋದಿ ಅವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿರುವುದು ಯಾರನ್ನ ? ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪರನ್ನು. ಜೈಲಿ ಹೋಗಿ ಬಂದವರಿಗೆ ಮತ್ತೆ ನೀವು ವೋಟು ಹಾಕುತ್ತೀರಾ. ಇಂಥವರು ಮುಖ್ಯಮಂತ್ರಿ ಆಗಬೇಕಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹೇಳಿಕೊಳ್ಳುವಂಥ ಯಾವ ಸಾಧನೆಯನ್ನೂ ಮಾಡಿಲ್ಲ. ಸೀರೆ, ಸೈಕಲ್ ಕೊಟ್ಟೆ ಎಂದು ಎರಡು ವಿಷಯ ಹೇಳುತ್ತಾರೆ. ಅದನ್ನು ಬಿಟ್ಟರೆ ಮೂರನೆಯದಾಗಿ ಜೈಲಿಗೆ ಹೋಗಿ ಬಂದೆ ಎಂದು ಹೇಳಬೇಕು. ಅದನ್ನು ಬಿಟ್ಟು ಯಡಿಯೂರಪ್ಪನವರ ಸಾಧನೆಗಳು ಏನೂ ಇಲ್ಲ. ಅವರು ಜೈಲಿಗೆ ಹೋಗಿ ಬಂದಿದ್ದನ್ನು ನಾವು ನೆನಪಿಸಿದರೆ ಯಡಿಯೂರಪ್ಪ ಮೈ ಮೇಲೆ ದೆವ್ವಬಂದವರಂತೆ ಆಡುತ್ತಾರೆ. ಯಾವುದನ್ನೂ ನಾನು ಸೃಷ್ಟಿ ಮಾಡಿ ಹೇಳುತ್ತಿಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದು ಸುಳ್ಳಾ ಎಂದು ಮರು ಪ್ರಶ್ನಿಸಿದರು.

ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ, ಕ್ಷೀರಭಾಗ್ಯ, ಅನ್ನಭಾಗ್ಯ, ಆರೋಗ್ಯಭಾಗ್ಯದಂತ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದೇ ಭ್ರಷ್ಟಾಚಾರ ವಿಲ್ಲದೆ ಉತ್ತಮ ಆಡಳಿತ ಮಾಡಿದೆ. ಜತೆಗೆ ಜಮಖಂಡಿ ತಾಲ್ಲೂಕಿನ 30ಸಾವಿರ ಎಕರೆಗೆ ನೀರು ಕಲ್ಪಿಸುವ ಬಬಲೇಶ್ವರ ಏತ ನೀರಾವರಿಗೆ 3700ಕೋಟಿ ಖರ್ಚು ಮಾಡಲಾಗಿದೆ. 211ಕೋಟಿ ವೆಚ್ಚದಲ್ಲಿ ಗಲಗಲಿ ಮತ್ತು ಮರಗತ್ತಿ ಏತ ನೀರಾವರಿ ಯೋಜನೆ ಜಾರಿಗೆ ತರುತ್ತಿದೆ. ಇದ್ಯಾವುದನ್ನೂ ಯಡಿಯೂರಪ್ಪ ಸರ್ಕಾರ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ