ಕೆಪಿಸಿಸಿ ಅಧ್ಯಕ್ಷಗಾದಿಗೆ ಎಚ್.ಕೆ.ಪಾಟೀಲ್ ಹೆಸರು

 

ಬೆಂಗಳೂರು, ಜೂ.23-ಕಾಂಗ್ರೆಸ್‍ನ ಹಿರಿಯ ಶಾಸಕ, ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ ಎಚ್.ಕೆ.ಪಾಟೀಲ್ ಅವರ ಹೆಸರು ಕೆಪಿಸಿಸಿ ಅಧ್ಯಕ್ಷಗಾದಿಗೆ ಪ್ರಬಲವಾಗಿ ಕೇಳಿಬರುತ್ತಿದೆ.
ಬಜೆಟ್ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲು ಹೈಕಮಾಂಡ್ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಈ ಹುದ್ದೆ ಮೇಲೆ ಕಣ್ಣಿಟ್ಟಿರುವ ಹಲವರು ಪ್ರಬಲ ಲಾಬಿ ನಡೆಸಿದ್ದರಾದರೂ ಮುಂಚೂಣಿಯಲ್ಲಿ ಎಚ್.ಕೆ.ಪಾಟೀಲ್ ಅವರ ಹೆಸರು ಕೇಳಿಬಂದಿದೆ.

ಹೈಕಮಾಂಡ್ ವರಿಷ್ಠರಾದ ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಇವರ ಪರವಾಗಿ ನಿಂತಿದ್ದಾರೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಯುವ ಮುಖಂಡರಾದ ದಿನೇಶ್‍ಗುಂಡೂರಾವ್ ಅಥವಾ ಕೃಷ್ಣಭೆರೇಗೌಡ ಅವರಿಗೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಒಲವು ವ್ಯಕ್ತಪಡಿಸಿದ್ದರು.

ಕೃಷ್ಣಭೆರೇಗೌಡ ಅವರು ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ದಿನೇಶ್‍ಗುಂಡೂರಾವ್ ಅವರ ಸಮುದಾಯದ ಒಬ್ಬ ಸಚಿವರಾಗಿದ್ದಾರಲ್ಲದೆ, ಮತ್ತೊಬ್ಬರು ಸ್ಪೀಕರ್ ಆಗಿದ್ದಾರೆ. ಪಕ್ಷ ಅವರನ್ನು ಯಾವ ರೀತಿ ಪರಿಗಣಿಸುತ್ತದೆ. ಅಲ್ಲದೆ, ಸಂಸದರೆಲ್ಲ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಸಂಸದರಲ್ಲೇ ಒಬ್ಬರಿಗೆ ನೀಡಬೇಕೆಂದು ಒತ್ತಾಯಿಸಿದ್ದರು.
ಕೆ.ಎಚ್.ಮುನಿಯಪ್ಪ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೂ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈಗಾಗಲೇ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ದಲಿತರಿಗೆ ನೀಡಲಾಗಿದೆ. ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಅದೇ ವರ್ಗದವರಿಗೆ ಕೊಡಲಾಗಿದೆ.

ಮತ್ತೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಅವರಿಗೆ ಕೊಡಬೇಕೇ ಎಂಬ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ. ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್ ಅವರ ಹೆಸರು ಕೂಡ ಕೇಳಿಬಂದಿತ್ತು.
ಸಿದ್ದರಾಮಯ್ಯನವರು ನನಗೆ ಈ ಹುದ್ದೆ ವಹಿಸಿಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಸತೀಶ್‍ಜಾರಕಿ ಹೊಳಿ ಅವರು ಎಂ.ಬಿ.ಪಾಟೀಲ್ ಅಥವಾ ಈಶ್ವರ್ ಖಂಡ್ರೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಬೇಕು ಎಂದು ತಿಳಿಸಿದ್ದಾರೆ.
ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕದವರಿಗೆ ಹೆಚ್ಚು ಸ್ಥಾನ ಲಭ್ಯವಾಗಿಲ್ಲ. ಹಾಗಾಗಿ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್ ಅವರಿಗೆ ಈ ಹುದ್ದೆ ನೀಡುವ ಮೂಲಕ ಪ್ರಾದೇಶಿಕ ಅಸಮತೋಲನ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ದಿನೇಶ್‍ಗುಂಡೂರಾವ್ ಹಾಗೂ ಎಚ್.ಕೆ.ಪಾಟೀಲ್ ನಡುವೆ ಕೆಪಿಸಿಸಿ ಹುದ್ದೆಗೆ ತೀವ್ರ ಪೈಪೆÇೀಟಿ ನಡೆದಿದೆ. ಹೈಕಮಾಂಡ್ ಯಾರಿಗೆ ಈ ಜವಾಬ್ದಾರಿ ವಹಿಸಲಿದೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ