ಗೌರಿ ಲಂಕೇಶ್ ಹತ್ಯೆ ಮಾಡಿದವರು ಪತ್ತೆಯಾಗಬೇಕೇ ಹೊರತು ಅದರ ಹಿಂದೆ ಜಾತಿ, ಧರ್ಮದ ಚರ್ಚೆಯಾಗಬಾರದು: ಸಾಹಿತಿ ಬರಗೂರು ರಾಮಚಂದ್ರಪ್ಪ

 

ಬೆಂಗಳೂರು, ಜೂ.23-ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದವರು ಯಾರು ಎಂಬುದು ಪತ್ತೆಯಾಗಬೇಕೇ ಹೊರತು ಅದರ ಹಿಂದೆ ಜಾತಿ, ಧರ್ಮದ ಚರ್ಚೆಯಾಗಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಹತ್ಯೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಸಿಲುಕಿಸಲಾಗಿದೆ ಎಂದು ಹಿಂದು ಸಂಘಟನೆಗಳು ಆರೋಪ ಮಾಡಿವೆ. ಈ ಹತ್ಯೆ ಮಾಡಿದವರು ಮತ್ತು ಮಾಡಿಸಿದವರು ಯಾರು ಎಂಬುದಷ್ಟೇ ಮುಖ್ಯ. ಆತ ಹಿಂದೂ ಆಗಿರಬಹುದು ಅಥವಾ ಮುಸ್ಲಿಂ ಆಗಿರಬಹುದು, ಜಾತಿ ಧರ್ಮಗಳು ಅಡ್ಡಿಯಾಗಬಾರದು, ತನಿಖೆ ಸ್ವತಂತ್ರವಾಗಿ ನಡೆಯಬೇಕು. ಈ ಹಂತದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.

ಮೂಲಭೂತವಾದಿಗಳು ಪ್ರಗತಿಪರ ಸಾಹಿತಿಗಳನ್ನು ಹತ್ಯೆ ಮಾಡಲು ಹಿಟ್‍ಲಿಸ್ಟ್ ತಯಾರಿಸಿರುವುದು ಅತ್ಯಂತ ಆಘಾತಕಾರಿ. ಇದರಿಂದ ದೇಶ ಅತ್ಯಂತ ಸೂಕ್ಷ್ಮ ಸಂದರ್ಭದಲ್ಲಿ ಹಾದುಹೋಗುತ್ತದೆ ಎಂಬುದು ಗೊತ್ತಾಗುತ್ತದೆ. ಹಿಟ್‍ಲಿಸ್ಟ್‍ನಲ್ಲಿ ನನ್ನ ಹೆಸರಿರುವುದು ದುರಂತ. ನಾನು ಹಿಂದೂ ಮತ್ತು ಮುಸ್ಲಿಂ ಎರಡೂ ರೀತಿಯ ಮೂಲಭೂತವಾದವನ್ನು ವಿರೋಧಿಸುತ್ತಿದ್ದೇನೆ. ಧರ್ಮ, ಜಾತಿ ನೋಡಿ ಯಾವತ್ತೂ ಚರ್ಚೆ ಮಾಡಿಲ್ಲ. ಆರೋಗ್ಯಕರ ನಿಲುವು ಇರುವ ನನ್ನನ್ನೂ ಹಿಟ್‍ಲಿಸ್ಟ್‍ನಲ್ಲಿಟ್ಟಿದ್ದಾರೆ ಎಂದರೆ ರಾಷ್ಟ್ರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಭೇಕು ಎಂದರು.

ಕೋಮುವಾದ ಎಂದರೆ ಅದು ಹಿಂದೂ ಧರ್ಮದಲ್ಲಾದರೂ ಸರಿ, ಮುಸ್ಲಿಂ ಧರ್ಮದಲ್ಲಾದರೂ ಸರಿ. ಸಮಾಜದ ಶಾಂತಿ ಕದಡುವ ಯಾವುದೇ ಕೋಮುವಾದವಾದರೂ ಖಂಡಿಸಲೇಬೇಕು. ಸರ್ಕಾರ ನನ್ನ ಮನೆಗೆ ರಕ್ಷಣೆ ನೀಡಿದೆ. ಮನೆ ಬಳಿ ಗನ್‍ಮ್ಯಾನ್ ಇದ್ದಾರೆ. ಗೌರಿ ಹತ್ಯೆ ಪ್ರಕರಣದ ತನಿಖೆ ಕ್ಷಿಪ್ರವಾಗಿ ನಡೆಯುತ್ತಿದೆ. ಹತ್ಯೆಗೆ ಪ್ರಚೋದನೆ ನೀಡಿದವರ ಬಂಧನವೂ ಆಗಬೇಕು, ಅದೇ ರೀತಿ ಚಿಂತಕರಾದ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣವನ್ನು ಸರ್ಕಾರ ಭೇದಿಸಬೇಕು ಎಂದು ಉಪಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಪರಮೇಶ್ವರ್ ನನ್ನ ಸ್ನೇಹಿತರು. ಹೀಗಾಗಿ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದ್ದೇನೆ. ಇದು ಸೌಜನ್ಯದ ಭೇಟಿ ಎಂದರು.
ಹಜ್ ಭವನಕ್ಕೆ ಟಿಪ್ಪು ಘರ್ ಎಂಬ ಹೆಸರಿಡುವ ವಿಷಯವಾಗಿ ವಿವಾದ ಸೃಷ್ಟಿಸಲಾಗಿದೆ. ವಿವಾದಗಳಲ್ಲದ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇತ್ತೀಚೆಗೆ ನನ್ನ ಪತ್ನಿ ನಿಧನವಾಗಿರುವುದರಿಂದ ನಾನು ವೈಯಕ್ತಿಕವಾಗಿ ನೋವಿನಲ್ಲಿದ್ದೇನೆ. ವಿವಾದಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ