ಬೆಂಗಳೂರು: ಕರ್ನಾಟಕ ಈ ವರೆಗೂ ಸದಸ್ಯರ ಹೆಸರು ಸೂಚಿಸಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ರಾಜ್ಯದ ಸದಸ್ಯರೇ ಇಲ್ಲದ ಕಾವೇರಿ ಸಮಿತಿಯನ್ನು ರಚನೆ ಮಾಡಿದೆ. ಹಾಗಾದರೆ ರಾಜ್ಯ ಸರ್ಕಾರ ಈ ವರೆಗೂ ಸದಸ್ಯರ ಹೆಸರನ್ನೇಕೆ ಸೂಚಿಸಿಲ್ಲ. ಸರ್ಕಾರದ ಆತಂಕವೇನು?
ಪ್ರಸ್ತುತ ಕೇಂದ್ರ ಸರ್ಕಾರ ರಚನೆ ಮಾಡಿರುವ ಕಾವೇರಿ ಸಮಿತಿ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಹಿತಕ್ಕೆ ಮಾರಕವಾಗುವ ಅಂಶಗಳನ್ನು ಪ್ರಾಧಿಕಾರ ರಚನೆಯ ಅಧಿಸೂಚನೆಯಿಂದ ಕೈಬಿಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಆಗ್ರಹಪಡಿಸಿತ್ತು. ಅಂತೆಯೇ ತನಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ತನಕ ಪ್ರಾಧಿಕಾರ ಮತ್ತು ಸಮಿತಿಯ ಸದಸ್ಯ ಸ್ಥಾನಗಳಿಗೆ ತನ್ನ ಪ್ರತಿನಿಧಿಗಳ ಹೆಸರುಗಳನ್ನು ಕಳಿಸಿಕೊಡುವುದಿಲ್ಲ ಎಂಬುದು ರಾಜ್ಯ ಸರ್ಕಾರದ ನಿಲುವಾಗಿತ್ತು. ರಾಜ್ಯದ ತಕರಾರುಗಳನ್ನು ಇತ್ಯರ್ಥಪಡಿಸಬೇಕೆಂಬ ಷರತ್ತಿಗೆ ಒಳಪಟ್ಟು ಹೆಸರುಗಳನ್ನು ಕಳಿಸಿಕೊಡುವುದಾಗಿ ಇತ್ತೀಚೆಗೆ ಕೇಂದ್ರ ಜಲಸಂಪನ್ಮೂಲ ಮಂತ್ರಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಅಂತೆಯೇ ರಾಜ್ಯದ ಆತಂಕಗಳ ಕುರಿತ ಚರ್ಚೆಗೆ ಸದ್ಯದಲ್ಲೇ ಸಭೆ ಕರೆಯುವುದಾಗಿ ಕೇಂದ್ರ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಕೂಡ ಭರವಸೆ ನೀಡಿರುವುದಾಗಿ ಮುಖ್ಯಮಂತ್ರಿ ಹೇಳಿದ್ದರು.
ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ದೈನಂದಿನ ನೀರಿನ ಮಟ್ಟ, ಒಳಹರಿವು, ಹೊರಹರಿವು, ಆಯಾ ಪ್ರದೇಶಗಳಲ್ಲಿ ಬೀಳುವ ಮಳೆಯ ಪ್ರಮಾಣ, ಪ್ರಾಧಿಕಾರ ನೀಡಿದ ಆದೇಶಗಳ ಪಾಲನೆ ಆಗಿದೆಯೇ ಇಲ್ಲವೇ ಎಂಬುದೇ ಮುಂತಾದ ದೈನಂದಿನ ಕೆಲಸ ಕಾರ್ಯಗಳನ್ನು ನಿಯಂತ್ರಣ ಸಮಿತಿ ಮಾಡುತ್ತದೆ. ಹತ್ತು ದಿನಗಳಿಗೊಮ್ಮೆ ಸಭೆ ಸೇರಿ ವರದಿ ಶಿಫಾರಸುಗಳನ್ನು ಪ್ರಾಧಿಕಾರಕ್ಕೆ ಕಳುಹಿಸಿಕೊಡುತ್ತದೆ. ಪ್ರತಿ ಹತ್ತು ದಿನಗಳಿಗೊಮ್ಮೆ ನಡೆಯುವ ನಿಯಂತ್ರಣ ಸಮಿತಿ ಸಭೆಯ ಕೋರಂ ಸಂಖ್ಯೆ ಆರು. ಯಾವುದಾದರೂ ರಾಜ್ಯದ ಪ್ರತಿನಿಧಿ ನಿರ್ದಿಷ್ಟ ಸಭೆಗೆ ಬಾರದೆ ಹೋದಲ್ಲಿ, ಇನ್ನೊಂದು ಸಭೆ ಕರೆಯುವ ಕುರಿತು ಪರಿಗಣಿಸಲಾಗುವುದು.
ಆದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಇದ್ದಲ್ಲಿ, ಯಾವುದೇ ರಾಜ್ಯದ ಪ್ರತಿನಿಧಿ ಗೈರು ಹಾಜರಾಗಿದ್ದರೂ ಲೆಕ್ಕಿಸದೆ ಬಹುಮತದ ನಿರ್ಣಯವನ್ನು ಕೈಗೊಳ್ಳಲಾಗುವುದು ಮತ್ತು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ಇಬ್ಬರೂ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಾವೇರಿ ಪ್ರಾಧಿಕಾರ ಅಥವಾ ನಿಯಂತ್ರಣ ಸಮಿತಿಯ ಸಭೆ ಕರೆಯುವಂತಹ ಯಾವುದೇ ತುರ್ತು ಪರಿಸ್ಥಿತಿ ತಮಿಳುನಾಡಿನಲ್ಲಿ ಇಲ್ಲ. ಹೀಗಾಗಿ ಪ್ರಾಧಿಕಾರದ ಕರ್ತವ್ಯಗಳು ಮತ್ತು ಕಾರ್ಯಗಳ ಕುರಿತ ಒಕ್ಕಣೆಯನ್ನು ಸದ್ಯಕ್ಕೆ ತಡೆಹಿಡಿಯಬೇಕು. ರಾಜ್ಯ ಸರ್ಕಾರ ಎತ್ತಿರುವ ಈ ವಿಷಯಗಳು ಇತ್ಯರ್ಥವಾದ ನಂತರವೇ ನ್ಯಾಯಮಂಡಳಿಯ ವರದಿ- ಸುಪ್ರೀಂ ಕೋರ್ಟ್ ತೀರ್ಪಿನ ಜಾರಿಗೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿತ್ತು.
ಆದರೆ ಕರ್ನಾಟಕದ ಈ ಆತಂಕಗಳನ್ನು ದೂರಮಾಡದೇ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕಾವೇರಿ ಸಮಿತಿ ರಚನೆ ಮಾಡಿದೆ ಎನ್ನಲಾಗುತ್ತಿದೆ.