ಬಿಬಿಎಂಪಿ ಆಯುಕ್ತ ಮಹೇಶ್ವರ್‍ರಾವ್ ಅವರಿಗೆ ಹಿರಿಯ ಸದಸ್ಯರ ನೀತಿಪಾಠ

 

ಬೆಂಗಳೂರು, ಜೂ.22- ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೌನ್ಸಿಲ್ ಸಭೆಗೆ ಬಂದ ಬಿಬಿಎಂಪಿ ಆಯುಕ್ತ ಮಹೇಶ್ವರ್‍ರಾವ್ ಅವರಿಗೆ ಹಿರಿಯ ಸದಸ್ಯರು ನೀತಿಪಾಠ ಮಾಡಿದ ಪ್ರಸಂಗ ನಡೆಯಿತು.
ಮಹೇಶ್ವರ್‍ರಾವ್ ಅವರು ಕುಳಿತುಕೊಂಡೇ ಸಭೆಗೆ ತಮ್ಮ ಪರಿಚಯ ಮಾಡಿಕೊಳ್ಳಲು ಮುಂದಾದಾಗ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಹಿರಿಯ ಸದಸ್ಯ ಗುಣಶೇಖರ್ ಮತ್ತಿತರರು ನೀತಿಪಾಠ ಮಾಡಬೇಕಾಯಿತು.

ಪದ್ಮನಾಭರೆಡ್ಡಿ ಅವರು ಮಾತನಾಡಿ, ಕಮಿಷನರ್ ಸಾಹೇಬ್ರೇ… ಇದು ವಿಧಾನಸೌಧ ಅಲ್ಲ, ನೀವು ಸಿಎಂ, ಡಿಸಿಎಂ ಹೀಗೆ ಯಾರ ಮುಂದೆ ಬೇಕಾದರೂ ಕುಳಿತುಕೊಂಡು ಮಾತನಾಡಬಹುದು. ಆದರೆ, ಎಲ್ಲರೂ ಪೂಜ್ಯ ಮಹಾಪೌರರೇ ಎಂದು ಮೇಯರ್ ಅವರನ್ನು ಸಂಬೋಧಿಸುತ್ತಾರೆ. ಅವರಿರುವಾಗ ಯಾರೇ ಆದರೂ ಎದ್ದು ನಿಂತೇ ಉತ್ತರ ಕೊಡಬೇಕು. ಇದು ಬಿಬಿಎಂಪಿಯ ನಿಯಮ ಎಂದು ತಿಳಿಸಿದರು.

ಇದು ಅರ್ಥವಾಗದೆ ಕಮಿಷನರ್ ಮಾತನಾಡಲು ತಡಬಡಾಯಿಸಿದರು. ಆಗ ಗುಣಶೇಖರ್ ಪಾಲಿಕೆ ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ಮಾತನಾಡಬೇಕು ಎಂದು ತಿಳಿಸಿಕೊಟ್ಟರು. ಆಗ ಕಮಿಷನರ್ ಎದ್ದುನಿಂತು ತಮ್ಮ ಪರಿಚಯ ಮಾಡಿಕೊಂಡರು.
ಮಹೇಶ್ವರ್‍ರಾವ್ ಅವರು ಸುಮಾರು 6.5 ಅಡಿ ಎತ್ತರವಿದ್ದು, ಮೈಕ್ ಕೆಳಭಾಗದಲ್ಲಿರುವುದರಿಂದ ಅವರು ಬಗ್ಗಿಕೊಂಡೇ ಮಾತನಾಡಬೇಕಾಯಿತು. ಈಗ ಓಕೆನಾ ಎಂದು ಸದಸ್ಯರನ್ನು ನಗುತ್ತಾ ಕೇಳಿದರು.

ನೀವೇ ಮುಂದುವರೀತೀರಾ: ಸಭೆ ಆರಂಭವಾಗುತ್ತಿದ್ದಂತೆ ಹಿರಿಯ ಸದಸ್ಯ ಗುಣಶೇಖರ್ ಮಾತನಾಡಿ, ಈ ಹಿಂದೆ ಮಂಜುನಾಥ್ ಪ್ರಸಾದ್ ಅವರು ಆಯುಕ್ತರಾಗಿದ್ದರು. ಚುನಾವಣೆ ಸಂದರ್ಭದಲ್ಲಿ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ನಿಮ್ಮನ್ನು ನಿಯೋಜಿಸಲಾಗಿದೆ. ಚುನಾವಣೆ ಮುಗಿದ ಕೂಡಲೇ ಹೀಗೆ ಬಂದವರನ್ನು ವಾಪಸು ಕಳಿಸಲಾಗುತ್ತದೆ. ಆದರೆ ನೀವಿನ್ನೂ ವರ್ಗಾವಣೆಗೊಂಡಿಲ್ಲ. ನೀವೇ ಇಲ್ಲಿ ಮುಂದುವರಿಯುತ್ತೀರಾ, ಇಲ್ಲವಾ ಎಂಬ ಗೊಂದಲ ಇದೆ ಎಂದು ಹೇಳಿದರು.
ಮಂಜುನಾಥ್ ಪ್ರಸಾದ್ ಅವರೇ ಮತ್ತೆ ಪಾಲಿಕೆಗೆ ಬರುತ್ತಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನೀವೇ ಇರ್ತೀರಾ, ಅಥವಾ ಅವರು ಬರ್ತಾರಾ ಎಂದು ಪ್ರಶ್ನಿಸಿದರು. ಇದಕ್ಕೆ ಮಹೇಶ್ವರ್‍ರಾವ್ ಸುಮ್ಮನೆ ನಕ್ಕರು.

ಇದಕ್ಕೆ ಮೇಯರ್ ಸಂಪತ್‍ರಾಜ್ ಪ್ರತಿಕ್ರಿಯಿಸಿ , ಸರ್ಕಾರದಿಂದ ಈವರೆಗೆ ಏನೂ ಆದೇಶ ಬಂದಿಲ್ಲ. ಹಾಗಾಗಿ ಮಹೇಶ್ವರ್‍ರಾವ್ ಅವರೇ ಮುಂದುವರಿಯುತ್ತಾರೆ ಎಂದು ಹೇಳಿದರು.
ಬಜೆಟ್ ಅನುಷ್ಠಾನ: ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಮಾತನಾಡಿ, ಸರ್ಕಾರ ಪಾಲಿಕೆ ಬಜೆಟ್‍ಗೆ ಅನುಮೋದನೆ ನೀಡಿದೆ. ಖರ್ಚು-ವೆಚ್ಚವನ್ನು ಸರಿದೂಗಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸಿ ಎಂದು ಕಂಡೀಷನ್ ಹಾಕಿದೆ. ಹಾಗಾಗಿ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದು ಹೇಳಿದರು.

ಈ ವೇಳೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮಾತನಾಡಿ, ಪ್ರತಿಬಾರಿ ಬಜೆಟ್ ಮಂಡಿಸಿದಾಗಲೂ ಸರ್ಕಾರಗಳು ಸರಿದೂಗಿಸಿ ಎಂದೇ ಹೇಳೋದು. ಹಾಗಾಗಿ ಬಜೆಟ್ ಅನುಷ್ಠಾನಕ್ಕೆ ಏನೂ ತೊಂದರೆ ಆಗಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಹೇಶ್ವರ್‍ರಾವ್, ಸರ್ಕಾರ ಬಜೆಟ್‍ಗೆ ಅನುಮೋದನೆ ನೀಡಿದೆ. ಅನುಮೋದನೆ ಸಂದರ್ಭದಲ್ಲಿ ಖರ್ಚು-ವೆಚ್ಚ ಏರುಪೇರಾಗುವುದು ಸಹಜ. ಆದ್ದರಿಂದ ಪೂರಕ ಬಜೆಟ್ ಮಂಡಿಸಿ ಇದನ್ನು ಸರಿದೂಗಿಸಿಕೊಳ್ಳಬಹುದು ಎಂದು ಹೇಳಿದರು.
ಹಿಂದಿನ ವರ್ಷದ ಮುಂದುವರಿದ ಕಾಮಗಾರಿಗಳು, ಮತ್ತೆ ಈಗ ಅನುಮೋದನೆ ಸಿಕ್ಕಿರುವ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆಂಪೇಗೌಡ ಜಯಂತಿ: ಸರ್ಕಾರದ ವತಿಯಿಂದ ಇದೇ 27ರಂದು ಅರಮನೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಪಾಲಿಕೆಯ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡ್‍ಗಳ ಜನರನ್ನು ಸಮಾರಂಭಕ್ಕೆ ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಎಲ್ಲ ಸದಸ್ಯರೂ ಸಹಕಾರ ನೀಡಬೇಕೆಂದು ಮೇಯರ್ ಸಂಪತ್‍ರಾಜ್ ಕೋರಿದರು.

ಈ ವೇಳೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತಿತರರು ಮಾತನಾಡಿ, ಪ್ರತಿವರ್ಷ ಬಿಬಿಎಂಪಿ ವತಿಯಿಂದ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದೆ. ಆದರೆ, ಈ ಬಾರಿ ಸರ್ಕಾರವೇ ಮಾಡುತ್ತಿದೆ. ಈ ವರ್ಷ ಪಾಲಿಕೆಯಿಂದ ಮಾಡುತ್ತೀರೋ, ಇಲ್ಲವೋ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಎಂ.ಶಿವರಾಜ್, ಪ್ರತಿ ವರ್ಷ ಏಪ್ರಿಲ್‍ನಲ್ಲಿ ನಾಡಪ್ರಭುವಿನ ಜಯಂತಿ ಆಚರಣೆ ಮಾಡುತ್ತಿದ್ದೆವು. ಈ ಬಾರಿ ವಿಧಾನಸಭಾ ಚುನಾವಣೆ ಎದುರಾದುದ್ದರಿಂದ ಮಾಡಲಾಗಲಿಲ್ಲ. ಜೂ.27ರಂದು ಸರ್ಕಾರ ಮಾಡುತ್ತಿರುವ ಕೆಂಪೇಗೌಡ ಜಯಂತಿ- ಪಾಲಿಕೆ ಮಾಡುವ ಜಯಂತಿ ಬೇರೆ ಬೇರೆ ಎಂದರು.

ನಿನ್ನೆ ಮೇಯರ್ ಸಂಪತ್‍ರಾಜ್ ಅವರು ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಿ ಚರ್ಚಿಸಿದ್ದಾರೆ. ಸದ್ಯದಲ್ಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಜುಲೈನಲ್ಲಿ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಪ್ರತಿಧ್ವನಿಸಿದ ವಿದ್ಯುತ್ ಗುತ್ತಿಗೆದಾರರ ಪ್ರತಿಭಟನೆ: ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮಾತನಾಡಿ, ಕಳೆದ 10 ತಿಂಗಳಿಂದ ಬಿಲ್ ಬಿಡುಗಡೆಯಾಗಿಲ್ಲ ಎಂದು ವಿದ್ಯುತ್ ಗುತ್ತಿಗೆದಾರರು ಬೀದಿ ದೀಪ ಹಾಕದೆ ಪ್ರತಿಭಟನೆ ಮಾಡಿದರು. ಆದರೂ ಈವರೆಗೆ ಅಧಿಕಾರಿಗಳು ಬಿಲ್ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾರ್ಕ್‍ಗಳಲ್ಲಿ ವಿದ್ಯುತ್ ದೀಪ ಇಲ್ಲದಿದ್ದರೆ ಅವು ಲವರ್ಸ್ ಪ್ಯಾರಡೈಸ್ ಆಗಿಬಿಡುತ್ತವೆ. ಅಪರಾಧ ಚಟುವಟಿಕೆಗಳು ಹೆಚ್ಚಾಗಿಬಿಡುತ್ತವೆ ಎಂದು ಎಚ್ಚರಿಸಿದರು.

ಬೀದಿದೀಪ ಇಲ್ಲದ ಬಗ್ಗೆ ನಮ್ಮ ವಾರ್ಡ್‍ನ ಜನರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಏನೂ ಕ್ರಮ ತೆಗೆದುಕೊಳ್ಳದೆ ಏಕೆ ಸುಮ್ಮನಿದ್ದೀರ ಎಂದು ಕಟ್ಟೆ ಸತ್ಯನಾರಾಯಣ ಅವರು ಮೇಯರ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಪತ್‍ರಾಜ್, ಕಳೆದ ಪಾಲಿಕೆ ಸಭೆಯಲ್ಲೇ ವಿದ್ಯುತ್ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡುವಂತೆ ನಾನು ಆದೇಶಿಸಿದ್ದೆ. ವಿಶೇಷ ಆಯುಕ್ತ ವಿಜಯ್‍ಶಂಕರ್ ಅವರು ಬಿಲ್ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರೂ ಈವರೆಗೂ ಬಿಲ್ ಬಿಡುಗಡೆಯಾಗಿಲ್ಲ. ಅವರೇ ಇದಕ್ಕೆ ಉತ್ತರ ನೀಡಲಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಬಿಲ್ ಬಿಡುಗಡೆಯಾಗದಿರುವುದಕ್ಕೆ ಸಿಡಿಮಿಡಿಗೊಂಡು ತಕ್ಷಣವೇ ಬಿಲ್ ಬಿಡುಗಡೆ ಮಾಡಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ