ರಸ್ತೆಯಲ್ಲಿ ಹೋಗಬೇಕಾದರೆ ಕಸ ನೋಡಿ ನಾನೇ ತಲೆ ತಗ್ಗಿಸಿದ್ದೇನೆ : ಸಿಎಂ ಕುಮಾರಸ್ವಾಮಿ

ಬೆಂಗಳೂರು: ರಸ್ತೆಯಲ್ಲಿ ಹೋಗಬೇಕಾದ್ರೆ ಕಸ ನೋಡಿ ನಾನೇ ತಲೆ ತಗ್ಗಿಸಿದ್ದೇನೆ. ಕಸದ ಮಾಫಿಯಾ ಏನು ಅನ್ನೋದನ್ನ ನಾನು ತಿಳಿದುಕೊಂಡಿದ್ದೇನೆ. ಕಸದ ಮಾಫಿಯಾವನ್ನ ಮಟ್ಟಹಾಕಬೇಕಿದೆ ಎಂದು ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ, ಕಾವೇರಿ ಪ್ರದೇಶದಲ್ಲಿ ಬೆಳೆಯುವ ಬೆಳೆ ಬಗ್ಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್‌‌ ಗಡ್ಕರಿ ಬಳಿ‌ ಮಾತನಾಡಿದ್ದೇನೆ ಎಂದು ತಿಳಿಸಿದರು. ಕಾವೇರಿ ನದಿ ಕಣಿವೆಯ ರೈತರು ಸಮಿತಿ ಹೇಳಿದ ಬೆಳೆಯನ್ನೇ ಬೆಳೆಯಬೇಕೆಂದು ಹೇಳುತ್ತಾರೆ. ಇದು ಕೇವಲ ಕರ್ನಾಟಕ ರೈತರಿಗೆ ಮಾತ್ರ ಎಂದು ಹೇಳುತ್ತಾರೆ. ಇದ್ಯಾವ ನ್ಯಾಯ ನಮ್ಮ ರೈತರು ಅವರು ಯಾರೋ ಹೇಳುವ ಬೆಳೆ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ನಾವು ಉಲ್ಲಂಘನೆ ಮಾಡಲ್ಲ. ಆದ್ರೆ ಕೆಲವೊಂದು ಸ್ಕೀಂಗಳಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಸ್ಕೀಂ ರಚನೆ ಮಾಡಬೇಕಾದರೆ ಸಂಸತ್‌ನಲ್ಲಿ ಚರ್ಚೆಯಾಗಬೇಕಿದೆ. ಸ್ಕೀಂ ರಚನೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲು ಮನವಿ ಮಾಡಿಕೊಂಡಿದ್ದೀವಿ ಎಂದರು.
ಇನ್ನು ನೀತಿ ಆಯೋಗ ಸಭೆಗೆ ಹೋಗಿದ್ದಾಗ ದೆಹಲಿ ಸಿಎಂ ಕೇಜ್ರಿವಾಲ್‌ರನ್ನು ಭೇಟಿಯಾಗಿ ಮಾತನಾಡಿರುವ ಸಂಗತಿಯನ್ನು ಸಿಎಂ ಅಲ್ಲಗಳೆದರು. ಕೇಜ್ರಿವಾಲ್‌ ಅವರ ಪತ್ನಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ತಾನು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಕೋಲ್ಕತ್ತಾ ಸಿಎಂ ಮಮತಾ ಬ್ಯಾನರ್ಜಿ ಮಾತುಕತೆ ನಡೆಸಿದೆವು ಎಂದು ತಿಳಿಸಿದರು.
ಇನ್ನು ಈ ಬಾರಿ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡುವುದು ಬೇಡ, ಪೂರಕ ಬಜೆಟ್‌ ಮಂಡಿಸಿದರೆ ಸಾಕೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಬಜೆಟ್‌ ಮಂಡಿಸುವುದರಲ್ಲಿ ಅನುಭವ ಇರುವವರು ಹಾಗೂ ಹಿರಿಯರು ಎಂದು ಸಲಹೆ ಕೊಟ್ಟಿದ್ದಾರೆ. ಪೂರಕ ಬಜೆಟ್‌ ಅವರ ವೈಯಕ್ತಿಕ ಹೇಳಿಕೆ ಆಗಿದೆ. ಏನೇ ಮಾಡಬೇಕಾದರೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು‌ ಎಂದು ಸ್ಪಷ್ಟಪಡಿಸಿದರು.
ಯಶಸ್ವಿನಿ ಯೋಜನೆಯನ್ನ ಮುಂದುವರೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಆದ್ರೆ ಕೇಂದ್ರ ಸರ್ಕಾರದ ಯೋಜನೆಯಡಿ ಸೇರಿಸಬೇಕೆಂಬ ಪ್ರಸ್ತಾಪ ಇದೆ. ಹಾಗಾಗಿ ಎರಡು ತಿಂಗಳು ಪ್ರಾಥಮಿಕವಾಗಿ ಜಾರಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ