ಕಾಶ್ಮೀರ: ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಸಿಎಂ ಮುಫ್ತಿ, ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ಹೊರನಡೆದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಮಂಗಳವಾರ ರಾಜ್ಯಪಾಲ ಎನ್ಎನ್ ವೊಹ್ರಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಜೆಪಿ, ಪಿಡಿಪಿ ಜತೆಗಿನ ಮೈತ್ರಿ ಮುರಿದುಕೊಳ್ಳುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರಾಜಭವನಕ್ಕೆ ಆಗಮಿಸಿದ ಮುಫ್ತಿ, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ರಾಜೀನಾಮೆ ಬಳಿಕ ಮುಫ್ತಿ, ಪೀಪಲ್ಸ್ ಡೆಮೊಕ್ರಟಿಕ್ ಪಕ್ಷದ(ಪಿಡಿಪಿ) ತುರ್ತು ಸಭೆ ಕರೆದಿದ್ದು, ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ, ಕಾಶ್ಮೀರದ ತನ್ನ ಎಲ್ಲಾ ಸಚಿವರನ್ನು ದೆಹಲಿಗೆ ಕರೆಯಿಸಿಕೊಂಡ ಬಿಜೆಪಿ, ಕಾಶ್ಮೀರದ ಸಮ್ಮಿಶ್ರ ಸರ್ಕಾರದಿಂದ ಹೊರ ಬರುವ ನಿರ್ಧಾರ ಪ್ರಕಟಿಸಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆ ಮೈತ್ರಿ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರದಿಂದ ಹೊರ ಬರುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಮಾಧವ್ ಅವರು ಹೇಳಿದ್ದಾರೆ. ಅಲ್ಲದೆ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಬಿಜೆಪಿ ಮನವಿ ಮಾಡಿದ್ದು, ರಾಜ್ಯಪಾಲರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ದೇಶದ ಅವಿಭಾಜ್ಯ ಅಂಗ ಆಗಿರುವ ಕಾಶ್ಮೀರದ ಜನರ ಆಶಯಗಳಿಗೆ ಸ್ಪಂದಿಸುವುದರ ಜತೆಗೆ ದೇಶದ ಹಿತಾಸಕ್ತಿಯನ್ನು ಪರಿಗಣಿಸಿ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ಬಿಜೆಪಿ ಒತ್ತಾಯಿಸುತ್ತಿದೆ ಎಂದು ಮಾಧವ್ ಹೇಳಿದ್ದಾರೆ.

2014ರಲ್ಲಿ ನಡೆದ ಜಮ್ಮು-ಕಾಶ್ಮೀರದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಸುಮಾರು ಎರಡು ತಿಂಗಳ ಕಾಲ ಸರ್ಕಾರ ರಚನೆ ಕಸರತ್ತು ನಡೆಸಿದ ಬಳಿಕ, ತಮ್ಮ-ತಮ್ಮ ಸಿದ್ಧಾಂತಗಳನ್ನು ಬದಿಗೊತ್ತಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ರಚಿಸಿದ್ದವು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ