ದೋಸ್ತಿಗಳ ನಡುವೆ ಭಿನ್ನಮತಕ್ಕೆ ಕಾರಣವಾದ ಬಜೆಟ್ : ಸಿದ್ದರಾಮಯ್ಯ ಸಲಹೆಗೆ ಎಚ್ ಡಿಕೆ ತಿರಸ್ಕಾರ

ಬೆಂಗಳೂರು: 2018-19ನೇ ಸಾಲಿನ  ಪೂರ್ಣ ಪ್ರಮಾಣದ ಬಜೆಟ್ ಮಂಡನೆ ವಿಚಾರವಾಗಿ  ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದೆ.

ಹೊಸ ಬಜೆಟ್ ಅಗತ್ಯವಿಲ್ಲ ಪೂರಕ ಬಜೆಟ್ ಮಂಡನೆ ಮಾಡಲಿ ಎಂದು ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿದರೆ ಇದನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ  ಎಚ್. ಡಿ. ಕುಮಾರಸ್ವಾಮಿ ಹೊಸ ಸರ್ಕಾರದ ಯೋಜನೆಗಳ ಜಾರಿಗೆ ಹೊಸ ಬಜೆಟ್ ಆಗತ್ಯ ಎಂದಿದ್ದಾರೆ.

ಚುನಾವಣೆಯಲ್ಲಿ ಒಂದೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೂ ನಾವು ಹೊಸ ಬಜೆಟ್ ಮಂಡನೆ ಮಾಡಲಿದ್ದೇವೆ ಎಂದು ನೀವು (ಸಿದ್ದರಾಮಯ್ಯ) ಚುನಾವಣೆ ಪೂರ್ವದಲ್ಲಿ ಹೇಳಿರುವುದು ನನಗೆ ಸ್ಪಷ್ಟವಾಗಿ ನೆನಪಿದೆ ಎಂದಿರುವ ಕುಮಾರಸ್ವಾಮಿ ತಾನು ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಕ್ ಗಾಂಧಿ ಅವರನ್ನು ಭೇಟಿಯಾಗಿ ಮನವಿ ಮಾಡುವೆನು ಎಂದಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ “ಫೆಬ್ರವರಿಯಲ್ಲಿ ನಾವು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದೇವೆ.ಅಲ್ಲದೆ ಅದರಲ್ಲಿ ಜುಲೈ ಅಂತ್ಯದವರೆಗಿನ ಲೇಖಾನುದಾನಕ್ಕೆ ಒಪ್ಪಿಗೆ ಪಡೆದಿದ್ದೇವೆ. ಹೀಗಿರಲು ಮತ್ತೆ ಪೂರ್ಣ ಬಜೆಟ್ ಮಂಡನೆ ಅಗತ್ಯವಿಲ್ಲ. ಕೇವಲ ಪೂರಕ ಬಜೆಟ್ ಮಂಡನೆ ಸಾಕು” ಎಂದಿದ್ದರು.

“ಸಂವಿಧಾನದ 205 ನೇ ವಿಧಿಯು ಪೂರಕ ಬಜೆಟ್ ಗೆ ಅವಕಾಶ ನೀಡುತ್ತದೆ. ಹೊಸ ಸರ್ಕಾರದಲ್ಲಿ ಕುಮಾರಸ್ವಾಮಿ ತಾವೇನಾದರೂ ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಮಾಡಬೇಕೆಂದು ಅಂದುಕೊಂಡಲ್ಲಿ ಈ ಪೂರಕ ಬಜೆಟ್ ಮೂಲಕ ಮಾಡಬಹುದು”ಒಂದು ವೇಳೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಬೇಕೆಂದಾದರೆ ಪೂರಕ ಬಜೆಟ್ ಗೆ ಅವಕಾಶ ಕಲ್ಪಿಸುವ ಅಗತ್ಯವೇನು?” ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಯಿಸಿರುವ ಕುಮಾರಸ್ವಾಮಿ “ನಾವು ಇದನ್ನು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಿದ್ದೇವೆ.ಹೊಸ ಸರ್ಕಾರದ ಗುರಿ ಏನಿದೆ ಎನ್ನುವುದನ್ನು ತೋರಿಸಬೇಕಿದೆ. ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿರುವುದರಿಂದ ಪೂರಕ ಬಜೆಟ್ ನ ಮಿತಿಗೆ ನಾವು ಒಳಪಡಲು ಸಾಧ್ಯವಿಲ್ಲ”

ಕಾಂಗ್ರೆಸ್ ಮತ್ತು ಜೆಡಿ (ಎಸ್) ಹಲವಾರು ಕಾರ್ಯಕ್ರಮಗಳನ್ನು ಚುನಾವಣೆಗೆ ಮುನ್ನ ಘೋಷಿಸಿದೆ, ಚುನಾವಣೆ ಬಳಿಕವೂ ಸಾಕಷ್ಟು ನೂತನ ಕಾರ್ಯಕ್ರಮಗಳನ್ನು ಸೇರ್ಪಡಿಸಲಾಗಿದೆ.ಹೀಗಾಗಿ ಪೂರಕ ಬಜೆಟ್ ಮಂಡನೆ ಮಾಡಿದಲ್ಲಿ ಎಲ್ಲವನ್ನೂ ಅಳವಡಿಸಿಕೊಳ್ಳುವ ಅವಕಾಶ ಸಿಗದು” ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ತನ್ನ ಅಧಿಕಾರಾವಧಿ ಪೂರ್ಣಗೊಳಿಸುವುದಕ್ಕೆ ಸುಮಾರು ಎರಡು ತಿಂಗಳಿರುವಾಗ ಫೆಬ್ರವರಿಯಲ್ಲಿ 2.1 ಲಕ್ಷ ಕೋಟಿ ರೂ ಮೊತ್ತದ ವಾರ್ಷಿಕ ಬಜೆಟ್ ಮಂಡನೆಯಾಗಿತ್ತು. ಆದರೆ ಇದೀಗ ಕುಮಾರಸ್ವಾಮಿ ಮತ್ತೆ ತಾವು ನೂತನ ಸರ್ಕಾರದ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

ಅವರನ್ನೇ ಕೇಳಿ

ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಯಿಸಿರುವ ಸಿದ್ದರಾಮಯ್ಯ “ಅವರೇಕೆ ಹಾಗೆನ್ನುತ್ತಾರೆ ನನಗೆ ತಿಳಿದಿಲ್ಲ, ನಾನದನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗಲಾರೆ. ಅದರ ಸಂಬಧ ಏನಿದ್ದರೂ ಕುಮಾರಸ್ವಾಮಿ ಅವರನ್ನೇ ಕೇಳಿಕೊಳ್ಳಿ ಎಂದಿದ್ದಾರೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ