ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆ – ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಜೂ.16- ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆಯೆಂದು ವಿಧಾನ ಸಭೆಯ ಮಾಜಿ ವಿರೂಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸ್ಥಳೀಯವಾಗಿಯೇ ಶಾಲಾ ಆಡಳಿತ ಮಂಡಳಿ ಉಸ್ತುವಾರಿಯಲ್ಲಿ ಸಮವಸ್ತ್ರ ತಯಾರಿಸಿ ನೀಡಬೇಕು ಎಂದಿದ್ದ ನಿಯಮವನ್ನು ಉಲ್ಲಂಘನೆ ಮಾಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ದೂರಿದರು.
ಈ ಹಿಂದೆ ಸ್ಥಳೀಯವಾಗಿ ಎಸ್‍ಡಿಎಂಸಿ ಮುಖಾಂತರ ಪಾರದರ್ಶಕವಾಗಿ ಸಮವಸ್ತ್ರ ಖರೀದಿ ಮಾಡಲಾಗುತಿತ್ತು ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಈ ಕಾನೂನಿಗೆ ತಿದ್ದುಪಡಿ ಮಾಡಿ ಹೊಸ ಕಾನೂನಿನನ್ವಯ ಸಮವಸ್ತ್ರ ವಿತರಣೆಗೆ ಮುಂದಾಗಿರುವುದು ನೋಡಿದರೆ ಇದರಲ್ಲಿ ಕಾಣದ ಕೈಗಳು ಇರುವುದು ಎದ್ದು ಕಾಣುತ್ತಿದೆ, ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಆರೋಪಿಸಿದರು.
ಮೊಹತ್‍ಲಾಲ್ ಇಂಡಸ್ಟ್ರೀಸ್ ಸಂಗಮ್ ಇಂಡಸ್ಟ್ರಿಯಲ್ ರಾಜಸ್ಥಾನ, ಬಾನಸವಾಡ್, ಜೈಕೊ ಇಂಡಸ್ಟ್ರೀಸ್ ಕಂಪನಿಗಳಿಗೆ ಅನೂಕೂಲವಾಗಲಿ, ಎಂಬ ಕಾರಣಕ್ಕೆ ಹಾಗೂ ದೊಡ್ಡ ಪ್ರಮಾಣದಲ್ಲಿ ಕಮಿಷನ್ ಹೊಡೆಯಲು ಈ ಹುನ್ನಾರ ಮಾಡಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಡೀಲ್ ಮಾಡಿಕೊಂಡಿರುವುದರಿಂದ ಸ್ಥಳೀಯವಾಗಿ ಉದ್ಯೋಗಕ್ಕೆ ಕೊಕ್ಕೆ ಹಾಕಿದಂತಾಗಿದೆ. ಹಾಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದೆಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ