ಬೆಂಗಳೂರು,ಜೂ.15-ರೈತರ ಸಾಲಮನ್ನಾ , ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗಟ್ಟುವಿಕೆ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಇದೇ 30ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ.
ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆ ಜೂ.30ರಿಂದ ಜುಲೈ 15ರವರೆಗೆ ಒಟ್ಟು ಆರು ತಂಡಗಳಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ.
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಿರುವ ಬಿಜೆಪಿ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಮೂಲಕ ಪ್ರಾರಂಭದಲ್ಲೇ ದೋಸ್ತಿ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ.
ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಂಚರಿಸಲಿರುವ ಈ ತಂಡವು ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ಪ್ರವಾಸ ಆರಂಭಿಸಲಿರುವ ಯುವ ಮೋರ್ಚಾದ ನಾಯಕರು ರೈತರ ಸಾಲಮನ್ನಾವನ್ನೇ ಪ್ರಧಾನವಾಗಿಟ್ಟುಕೊಂಡು ಹೋರಾಟ ನಡೆಸಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆಗೂ ಮುನ್ನ ರೈತರ ಸಾಲಮನ್ನಾ ಮಾಡುವ ವಿಷಯದಲ್ಲಿ ಜನತೆಗೆ ನೀಡಿದ ಆಶ್ವಾಸನೆ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರು ನಡೆದುಕೊಳ್ಳುತ್ತಿರುವ ರೀತಿನೀತಿಗಳ ಬಗ್ಗೆಯೂ ಜನತೆಗೆ ರೈತ ಮೋರ್ಚಾ ಮನವರಿಕೆ ಮಾಡಲಿದೆ.
ಮಾಜಿ ಸಚಿವ ಹಾಗೂ ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಮೊದಲ ತಂಡ ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಚಿಕ್ಕಮಗಳೂರು,ಉಡುಪಿ ಹಾಗೂ ಮಂಗಳೂರು ನಗರಕ್ಕೆ ಭೇಟಿ ಕೊಡಲಿದೆ.
ಈ ತಂಡದಲ್ಲಿ ಪಂಚಪ್ಪ ಕಲ್ಬುರ್ಗಿ, ಕೇಶವ ಕೆಂಜಗಿ, ಆರ್.ಟಿ.ಪಾಟೀಲ, ಮಹೇಶ್ ಬಾತೆ ಹಾಗೂ ಮಲ್ಲಿಕಾರ್ಜುನ ಬೇವನಹಳ್ಳಿ ಇರಲಿದ್ದಾರೆ.
ಶಂಕರ್ ಪಾಟೀಲ್ ನೇತೃತ್ವದ ಎರಡನೇ ತಂಡ ಬೀದರ್, ಕಲಬುರಗಿ ನಗರ, ಕಲಬುರಗಿ ಗ್ರಾಮಾಂತರ, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಲಿದೆ.
ಇದರಲ್ಲಿ ಬಸವರಾಜು ಇಂಗಿನ , ಲಿಂಗೇಗೌಡ್ರು, ಜಗನಾಥ ಜಿಲ್ಲಾಭಟ್ಟಿ , ಆರ್.ವಿ.ಶಂಕರಗೌಡರು ಹಾಗೂ ಮಾನಪ್ಪ ನಾಯಕ್ ಇರಲಿದ್ದಾರೆ.
ಈಶ್ವರ ಚಂದ್ರ ಹೊಸಮನಿ ನೇತೃತ್ವದ ತಂಡವು ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ, ಧಾರವಾಡ ಗ್ರಾಮಾಂತರ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ಕೊಡುವರು.
ಈ ತಂಡದಲ್ಲಿ ಬಸವರಾಜ ಕುಂಬಾರ ಯಲಿಗಾರ, ನೀಲಗಿ ಪಾಟೀಲ, ಗೋವಿಂದ ಕೊಪ್ಪದ, ಪ್ರಕಾಶ್ ಸಿರಿಗೇರಿ ಹಾಗೂ ಈಶಪ್ಪ ದುಗ್ಗಪ್ಪ ಹಿರೆಮನಿ ಇರಲಿದ್ದಾರೆ.
ನಂಜುಂಡೇಗೌಡ ನೇತೃತ್ವದ ತಂಡವು ಮೈಸೂರು ನಗರ, ಮೈಸೂರು ಗ್ರಾಮಾಂತರ, ಹಾಸನ, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗೆ ಭೇಟಿ ಕೊಡಲಿದೆ. ಇದರಲ್ಲಿ ಮಲ್ಲಪ್ಪ ಗೌಡ್ರು, ರೇಣುಕುಮಾರ್, ಮಧುಚಂದ್ರನ್ ಹಾಗೂ ಎಸ್.ಆರ್.ವೆಂಕಟೇಶ್ ಇರುರವರು.
ಪವಿತ್ರ ರಾಮಯ್ಯ ನೇತೃತ್ವದ ತಂಡವು ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಲಿಂಗಮೂರ್ತಿ, ಬ್ಯಾಟರಂಗೇಗೌಡರು, ಸ್ಮಿತಾ ನಾಯ್ಡು ಮತ್ತು ಸುಷ್ಮಾ ಅವರುಗಳು ಈ ತಂಡದಲ್ಲಿ ಇರಲಿದ್ದಾರೆ.
ಶಿವಪ್ರಸಾದ್ ನೇತೃತ್ವದ ತಂಡವು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಇದರಲ್ಲಿ ಎ.ರಾಮರೆಡ್ಡಿ , ಎಚ್.ಎಲ್.ಕೃಷ್ಣಪ್ಪ , ಲಲ್ಲೇಶ್ ರೆಡ್ಡಿ ಹಾಗೂ ಲೋಕೇಶ್ ಗೌಡ ಇರುವರು.