ಕರ್ತವ್ಯದ ಜೊತೆಗೆ ರಕ್ತದಾನದ ಮಹತ್ವವನ್ನು ತೋರಿದ ಕಾನ್‍ಸ್ಟೇಬಲ್ ಕೆ.ಲೋಕೇಶ್

 

ಬೆಂಗಳೂರು ,ಜೂ.15-ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಜವಾಬ್ದಾರಿಯುತ ಕರ್ತವ್ಯದ ಜೊತೆಗೆ ತಾವು ಸಹ ಜನಸ್ನೇಹಿಯಾಗಿ ಕೆಲಸ ಮಾಡುತ್ತೇವೆ ಎಂಬುದನ್ನು ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆ ಕಾನ್‍ಸ್ಟೇಬಲ್ ಕೆ.ಲೋಕೇಶ್ ಅವರು ತೋರಿಸಿಕೊಟ್ಟಿದ್ದಾರೆ.

ಪೆÇಲೀಸರಲ್ಲಿ ಮಾನವೀಯತೆ ಇಲ್ಲ ಎಂಬುದಕ್ಕೆ ಅಪವಾದ ಎಂಬಂತೆ ನಮ್ಮ ಕಾನ್‍ಸ್ಟೇಬಲ್ ಲೋಕೇಶ್ ಅವರ ಕಾಯಕ ಪ್ರಶಂಸೆಗೆ ಪಾತ್ರವಾಗಿದೆ.
ತಮ್ಮ ಕರ್ತವ್ಯದ ಜೊತೆಗೆ ರಕ್ತದಾನದ ಮಹತ್ವವನ್ನು ಅವರು ತೋರಿಸಿಕೊಟ್ಟಿದ್ದಾರೆ.
ರಕ್ತಕ್ಕಾಗಿ ಒಂದು ಜೀವ ಕಾಯುತ್ತಿದೆ ಎಂಬುದನ್ನು ಅರಿತ ಅವರು ತಕ್ಷಣ ಆಸ್ಪತ್ರೆಗೆ ಹೋಗಿ ರೋಗಿ ಒಬ್ಬರಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಲೋಕೇಶ್, ನಾನು ರಕ್ತದಾನ ಮಾಡಿರುವುದು ತುಂಬ ಖುಷಿಯಾಗಿದೆ. ಈ ಹಿಂದೆಯೂ ಮೂರು ಬಾರಿ ರಕ್ತದಾನ ಮಾಡಿದ್ದೇನೆ. ನಮ್ಮಿಂದ ಬೇರೆಯವರಿಗೆ ಸಹಾಯವಾದರೆ ಒಳ್ಳೆಯದು. ಪ್ರತಿಯೊಬ್ಬರು ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸಲು ಮುಂದೆ ಬರಬೇಕು ಎಂದರು.
ಒಬ್ಬರ ಪ್ರಾಣ ರಕ್ಷಣೆ ಮಾಡುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೆÇಲೀಸರಾದ ನಮ್ಮ ಕರ್ತವ್ಯ. ರಕ್ತದಾನ ಮಾಡಿ ಪ್ರಾಣ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಇದನ್ನು ಅರಿತು ನಾನು ರಕ್ತದಾನ ಮಾಡಿದ್ದೇನೆ ಎಂದು ಅವರು ಹೇಳಿದರು.
ಮೂಲತಃ ಮಾಗಡಿ ತಾಲ್ಲೂಕಿನ ಹೊಸಪಾಳ್ಯದ ನಿವಾಸಿಯಾದ ಕೆ.ಲೋಕೇಶ್ ಅವರು ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಕಾನ್‍ಸ್ಟೆಬಲ್ ಆಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದು , ಮಾಗಡಿ ರಸ್ತೆಯ ಪೆÇಲೀಸ್ ಕ್ವಾಟ್ರಸ್‍ನಲ್ಲಿ ನೆಲೆಸಿದ್ದಾರೆ.

ಮಂಗಳವಾರ ಲೋಕೇಶ್ ಅವರು ತಮ್ಮ ಅಧಿಕಾರಿ ಜೊತೆ ಕೆ.ಎಸ್.ಲೇಔಟ್ ಜಂಕ್ಷನ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಹೆಲ್ಮೆಟ್ ಧರಿಸದೆ ಬೈಕ್‍ನಲ್ಲಿ ಸ್ನೇಹಿತನ ಜೊತೆ ಬಂದ ವಿದ್ಯಾರ್ಥಿ ಉದಯ್ ಕಿರಣ್‍ನನ್ನು ತಡೆದು ದಂಡ ಹಾಕಲು ಮುಂದಾದರು. ಆಗ ಅವರು ತಾವು ರಕ್ತದಾನ ಮಾಡಲು ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಗಿದೆ ಎಂದು ಹೇಳುತ್ತಿದ್ದಂತೆ ಲೋಕೇಶ್ ಅವರ ಕರ್ತವ್ಯ ಪ್ರಜ್ಞೆ ಜೊತೆ ಮಾನವೀಯ ಪ್ರಜ್ಞೆ ಜಾಗೃತವಾಯಿತು.

ಎಲ್ಲಿ ಯಾರಿಗೆ ರಕ್ತ ಕೊಡಬೇಕು ಎಂದು ಲೋಕೇಶ್ ವಿವರ ಕೇಳಿದ್ದು, ನಗರದ ಖಾಸಗಿ ಕಾಲೇಜಿನ ಕ್ರೀಡಾ ಉಪನ್ಯಾಸಕ ವಿನಯ್ ಎಂಬುವರ ಸಂಬಂಧಿಕರೊಬ್ಬರು ಕ್ಯಾನ್ಸರ್‍ನಿಂದ ಬಳಲುತ್ತಿದ್ದು , ಅವರಿಗೆ ಎ+ ಗುಂಪಿನ ರಕ್ತದ ಅಗತ್ಯವಿದೆ ತುರ್ತಾಗಿ ಹೋಗಬೇಕು ಎಂದು ಬೈಕ್ ಸವಾರರು ಹೇಳಿದಾಗ, ನನ್ನದು ಅದೇ ಗ್ರೂಪ್. ನಾನು ನಿಮ್ಮ ಜೊತೆ ಬಂದು ರಕ್ತ ನೀಡುವುದಾಗಿ ಅವರೊಂದಿಗೆ ತೆರಳಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾನ್‍ಸ್ಟೇಬಲ್ ಲೋಕೇಶ್ ಅವರ ಮಾನವೀಯತೆಯನ್ನು ಕೊಂಡಾಡಿದ ಉದಯ್ ಕಿರಣ್ ಫೇಸ್‍ಬುಕ್ ಅಕೌಂಟ್‍ನಲ್ಲಿ ಲೋಕೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗಿದೆ.

ಇದೇ ರೀತಿ ಈ ಹಿಂದೆಯೂ ಹಲವಾರು ಪೆÇಲೀಸ್ ಅಧಿಕಾರಿಗಳು, ಹೆಡ್‍ಕಾನ್‍ಸ್ಟೆಬಲ್ಸ್ , ಕಾನ್‍ಸ್ಟೆಬಲ್ಸ್ ಹಾಗೂ ಮಹಿಳಾ ಕಾನ್‍ಸ್ಟೆಬಲ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಪ್ರಶಂಸೆಗೆ ಪಾತ್ರರಾಗಿರುವುದಲ್ಲದೆ ಪೆÇಲೀಸ್ ಇಲಾಖೆಗೆ ಕೀರ್ತಿ ತಂದಿರುವುದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ