ಪಂದ್ಯಾವಳಿಯಿಂದ ಹೊರಗುಳಿಯಲು ಮಹಿಳಾ ಗ್ರಾಂಡ್‍ಮಾಸ್ಟರ್ ಸೌಮ್ಯ ಸ್ವಾಮಿನಾಥನ್ ನಿರ್ಧರಿಸಿದ್ದಾರೆ

ಪುಣೆ, ಜೂ.13-ಇರಾನ್‍ನ ಹಮದನ್‍ನಲ್ಲಿ ನಡೆಯಲಿರುವ ಏಷ್ಯನ್ ಟೀಮ್ ಚೆಸ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಿಂದ ಹೊರಗುಳಿಯಲು ಮಹಿಳಾ ಗ್ರಾಂಡ್‍ಮಾಸ್ಟರ್ ಮತ್ತು ವಿಶ್ವ ಜ್ಯೂನಿಯರ್ ಬಾಲಕಿಯರ ಮಾಜಿ ಚಾಂಪಿಯನ್ ಸೌಮ್ಯ ಸ್ವಾಮಿನಾಥನ್ ನಿರ್ಧರಿಸಿದ್ದಾರೆ. ಹೆಡ್‍ಸ್ಕಾರ್ಪ್ ಅಥವಾ ಬುರ್ಖಾ ಕಡ್ಡಾಯವಾಗಿ ಧರಿಸಬೇಕೆಂಬ ಇರಾನ್ ಕಾನೂನನ್ನು ಪ್ರತಿಭಟಿಸಿ ಸೌಮ್ಯ ಈ ತೀರ್ಮಾನ ಕೈಗೊಂಡಿದ್ದಾರೆ.
ಜುಲೈ 26 ರಿಂದ ಆಗಸ್ಟ್ 4ರವರೆಗೆ ಇರಾನ್‍ನ ಹಮ್‍ದನ್‍ನಲ್ಲಿ ಏಷ್ಯಾ ತಂಡ ಚದುರಂಗ ಪಂದ್ಯಾವಳಿ ನಡೆಯಲಿದೆ. ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಲು ಸೌಮ್ಯ ಆಯ್ಕೆಯಾಗಿದ್ದರು. ಆದರೆ ಇಸ್ಲಾಮಿಕ್ ದೇಶದ ಕಡ್ಡಾಯ ಹೆಡ್‍ಸ್ಕಾರ್ಫ್ ನಿಯಮಕ್ಕೆ ಈ ಪ್ರತಿಭಾನ್ವಿತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಲವಂತವಾಗಿ ಹೆಡ್‍ಸ್ಕಾರ್ಫ್ ಅಥವಾ ಬುರ್ಖಾ ಧರಿಸಲು ನಾನು ಇಚ್ಚಿಸುವುದಿಲ್ಲ. ಇದು ಕಡ್ಡಾಯವಾಗಿ ಧರಿಸಬೇಕೆಂಬ ಕಾನೂನು ಇರಾನ್‍ನಲ್ಲಿದೆ ಎಂಬುದು ನನಗೆ ತಿಳಿದಿದೆ. ಇದು ಮಾನವ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ. ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಆಲೋಚನೆ, ಪ್ರಜ್ಞೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ನನ್ನ ಹಕ್ಕುಗಳನ್ನು ಉಳಿಸಿಕೊಳ್ಳಲು ನನಗೆ ಇರುವ ಏಕೈಕ ಮಾರ್ಗವೆಂದರೆ ಇರಾನ್‍ಗೆ ಹೋಗದಿರುವುದು ಎಂದು ಭಾರತದ ನಂಬರ್ 5 ಹಾಗೂ ವಿಶ್ವದ 87ನೇ ಕ್ರಮಾಂಕದ ಆಟಗಾರ್ತಿ ಹೇಳಿದ್ದಾರೆ.
2016ರಲ್ಲಿ ಇದೇ ಕಾರಣ ನೀಡಿ ಇರಾನ್‍ನಲ್ಲಿ ನಡೆದ ಏಷ್ಯನ್ ಏರ್‍ಗನ್ ಪಂದ್ಯಾವಳಿಯಿಂದ ಭಾರತದ ಅಗ್ರ ಶೂಟರ್ ಹೀನಾ ಸಿಧು ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ