ಬೆಂಗಳೂರು, ಜೂ.11- ರಾಜ್ಯದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಚಾರ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಮುಂದಾದರೆ ನಾನು ಒಂದು ನಿಮಿಷವೂ ಮುಖ್ಯಮಂತ್ರಿಯಾಗಿ ಮುಂದುವರೆಯಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ನಗರದಲ್ಲಿರುವ ಗಾಂಧಿ ಭವನಕ್ಕೆ ಭೇಟಿ ಕೊಟ್ಟು ಮಹಾತ್ಮಗಾಂಧೀಜಿಯವರ ಪುತ್ಥಳಿಗೆ ಪುಷ್ಪ ನಮನ ಅರ್ಪಿಸಿದ ನಂತರ ಅವರು ಮಾತನಾಡಿದರು. ವ್ಯವಸ್ಥೆಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಪೂರ್ಣವಾಗಿ ಮುಕ್ತಗೊಳಿಸುವುದು ಸುಲಭವಲ್ಲ. ಅಧಿಕಾರಿ ಮತ್ತು ನೌಕರರ ವರ್ಗಾವಣೆಯಿಂದ ಭ್ರಷ್ಟಾಚಾರ ಆರಂಭವಾಗುತ್ತದೆ. ಒಂದು ವೇಳೆ ಭ್ರಷ್ಟಾಚಾರವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮೂಲನೆ ಮಾಡಲು ತಾವು ಮುಂದಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ತಮ್ಮನ್ನು ಇರಲು ಬಿಡದಿರುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಶೃಂಗೇರಿಯ ಗುರುಗಳು ನಮ್ಮ ಮಠಕ್ಕೆ ತಾವು ಏನೂ ಮಾಡುವುದು ಬೇಡ, ಭ್ರಷ್ಟಾಚಾರ ನಿಲ್ಲಿಸಿ ಎಂದು ಹೇಳಿದರು. ಸಾಧ್ಯವಾದಷ್ಟು ಮಟ್ಟಿಗೆ ಭ್ರಷ್ಟಾಚಾರ ತಡೆಯುವ ಪ್ರಯತ್ನ ಮಾಡುವುದಾಗಿ ಹೇಳಿದ ಅವರು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಹೊರತು ಪೂರ್ಣ ಬಹುಮತವಿಲ್ಲದೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕಠಿಣ ನಿರ್ಧಾರ ಆಗುವುದಿಲ್ಲ. ಇನ್ನೆರಡು ಮೂರು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಆಡಳಿತವನ್ನು ಚುರುಕುಗೊಳಿಸಲಾಗುವುದು ಎಂದರು.
ಎಷ್ಟು ದಿನ ಬದುಕಿರುತ್ತೇನೆಯೋ ಎಂಬುದು ಗೊತ್ತಿಲ್ಲ. ಹಣದ ಅಗತ್ಯವಿಲ್ಲ. ಹಣ ಮಾಡುವ ಹುಚ್ಚೂ ಇಲ್ಲ. ಮಹಾತ್ಮ ಗಾಂಧೀಜಿಯವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಸರ್ಕಾರವನ್ನು ಮುನ್ನಡೆಸಿ ಬಡ ಕುಟುಂಬಗಳಿಗೆ ಸ್ಪಂದಿಸುವ ರೀತಿ ಆಡಳಿತ ನಡೆಸಲಾಗುವುದು ಎಂದರು.
ಮಹಾತ್ಮಗಾಂಧೀಜಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸರ್ಕಾರ ನಡೆಯಲಿದೆ ಎಂದು ಹೇಳಿದರು.
ಗಾಂಧಿ ತತ್ವಗಳನ್ನು ಮರೆಯುತ್ತಿರುವ ಕೆಟ್ಟ ದಿನಗಳು, ಅಶಾಂತಿ, ಹಿಂಸೆ ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಯುವ ಪೀಳಿಗೆಗೆ ಮಾನವೀಯ ಮೌಲ್ಯ ಪುನರ್ ಪ್ರತಿಷ್ಠಾಪಿಸಲು ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.
ದೇವರ ಕೃಪೆಯಿಂದ ಎರಡನೇ ಬಾರಿಗೆ ಸಮ್ಮಿಶ್ರ ಸರ್ಕಾರ ಮುನ್ನಡೆಸುವ ಜವಾಬ್ದಾರಿ ತಮ್ಮ ಮೇಲಿದೆ. ರಾಜಕೀಯ ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಸರ್ಕಾರದೊಂದಿಗೆ ಸಹಕರಿಸಿ. ಸರ್ಕಾರ ಐದು ವರ್ಷ ಸುಭದ್ರವಾಗಿ ಉತ್ತಮ ಆಡಳಿತ ನೀಡಲಿದೆ ಎಂದರು.
ಮಾಧ್ಯಮಗಳು ಬಿಂಬಿಸುವಂತೆ ಅತಂತ್ರ ಸರ್ಕಾರದ ಆತಂಕ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೋರಾಟದ ಅನುಭವದ ಮಾರ್ಗದರ್ಶನ ಪಡೆಯುತ್ತೇನೆ ಎಂದು ಹೇಳಿದರು.
ಗಾಂಧೀಜಿಯವರ ಸಿದ್ಧಾಂತ ಅನುಷ್ಠಾನ ಮಾಡಲು ಈ ಬಾರಿಯೂ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಗಾಂಧೀಜಿಯವರ ತತ್ವ ಅಳವಡಿಸಿಕೊಳ್ಳಲು ಕಾರ್ಯಕ್ರಮಗಳನ್ನು ಗಾಂಧೀ ಸ್ಮಾರಕ ಭವನ ರೂಪಿಸಿದರೆ ಸಂಪೂರ್ಣ ಸಹಕಾರ ನೀಡುತ್ತೇನೆ. ಕೆಲವು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಭೂಮಿಯ ತೊಂದರೆಯನ್ನು ನಿವಾರಿಸುತ್ತೇನೆ ಎಂದು ಹೇಳಿದರು.
ಕಸ್ತೂರಿಬಾ ಹಾಗೂ ಗಾಂಧೀಜಿಯವರ 150ನೆ ವರ್ಷಾಚರಣೆಗೆ ಸಂಬಂಧಿಸಿದಂತೆ ಗಾಂಧಿ ಸ್ಮಾರಕ ನಿಧಿಯ ಪ್ರಸ್ತಾವನೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು.
ಸರ್ಕಾರದ ಇಲಾಖೆಗಳ ಕಾರ್ಯವೈಖರಿ ಹೇಗೆ ನಡೆಯುತ್ತಿದೆ ಎಂಬುದನ್ನು ಕಳೆದೊಂದು ತಿಂಗಳಿಂದ ನೋಡುತ್ತಿದ್ದೇನೆ. ನನಗಿರುವ ಮಾನವೀಯತೆ ಅಧಿಕಾರಿಗಳಿಗೆ ಇರುವುದಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇನೆ. ಸ್ವಲ್ಪ ಸಮಯ ನೀಡಿ ಎಂದರೆ ಕುಮಾರಸ್ವಾಮಿ ಮಾತು ಉಳಿಸಿಕೊಳ್ಳಲಿಲ್ಲ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಕಷ್ಟ ಅರಿತಿದ್ದೇನೆ. ಸಾಲ ಮನ್ನಾ ಮಾಡಲು ಹೇಗೆ ಹಣ ಹೊಂದಿಸಬೇಕು, ಸದ್ಬಳಕೆ ಮಾಡಬೇಕು ಎಂಬುದರ ಜೊತೆಗೆ ಮುಂದೆ ರೈತರು ಸಾಲಗಾರರಾಗದಂತೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಕೆಟ್ಟಿರುವ ಅಧಿಕಾರಿಗಳನ್ನು ಸರಿಪಡಿಸುವ ದುಸ್ಸಾಹಸಕ್ಕೆ ಮುಂದಾಗಿದ್ದು, ಸಮಸ್ಯೆ ಹೊತ್ತು ಬರುವ ಬಡವರಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗುವುದು, ಅಲೆಸುವ ಪ್ರವೃತ್ತಿ ತಮ್ಮದಲ್ಲ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಖಾಸಗಿ ಮಟ್ಟಕ್ಕೆ ತರಬೇಕು.ಆರ್ಟಿಇನಲ್ಲಿ ಸರ್ಕಾರದ ನಿಯಂತ್ರಣ ಇಲ್ಲ. ಸರ್ಕಾರದಿಂದಲೂ ಹಣ ಪಡೆದು ಮತ್ತೆ ಪೆÇೀಷಕರಿಂದಲೂ ಹಣ ಪಡೆಯುತ್ತಿದ್ದು, ಸಂಬಂಧಪಟ್ಟ ಡಿಡಿಪಿಐ ಅಮಾನತುಗೊಳಿಸಲು ಸೂಚಿಸಿರುವುದಾಗಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ,ಸಚಿವ ಸ್ಥಾನ ಸಿಗಲಿಲ್ಲ ಎಂದು ಗುಂಪುಗಾರಿಕೆ ಮಾಡುವುದು, ಪಕ್ಷ ಬಿಟ್ಟು ಹೋಗುತ್ತೇನೆ ಎನ್ನುವುದು ಶಾಸಕರಿಗೆ ಗೌರವ ತರುವ ವಿಚಾರವಲ್ಲ. ಆಯ್ಕೆ ಮಾಡಿದ ಜನರಿಗೂ ಇದರಿಂದ ಗೌರವ ಬರುವುದಿಲ್ಲ. ಶಾಸನ ಸಭೆಗಳನ್ನು ಉತ್ತಮ ರೀತಿಯಲ್ಲಿ ನಡೆಸುವಂತಾಗಬೇಕು ಎಂದು ಸಲಹೆ ಮಾಡಿದರು.
ಭಾರತೀಯ ವಿದ್ಯಾಭವನ ಗಾಂಧಿ ವಿಚಾರಧಾರೆಗಳ ಕುರಿತ 100 ಸಂಪುಟಗಳನ್ನು ಹೊರತರುತ್ತಿದ್ದು, ಈಗಾಗಲೇ 27 ಸಂಪುಟಗಳು ಸಿದ್ಧಗೊಂಡಿವೆ ಎಂದರು.
ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಮಾತನಾಡಿ, ಹಣ ಮಾಡುವುದೇ ದಂಧೆಯಾಗಿದೆ. ಕೋಟಿಗಟ್ಟಲೆ ಹಣ ಮಾಡಿದರೂ ಸುಖ ಸಿಗುವುದಿಲ್ಲ. ಯಾವ ಅಂಗಡಿಯಲ್ಲೂ ಅದನ್ನು ಮಾರುವುದಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್, ಮಹಾತ್ಮಗಾಂಧೀಜಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ದೇಶಕ್ಕಾಗಿ ಏನು ಮಾಡುತ್ತೇವೆ ಎಂಬುದು ಮುಖ್ಯ. ಖಾದಿ ಬಗ್ಗೆ ಅನುಕಂಪವಿದ್ದರೆ ಸಾಲದು ಅದು ಬದುಕುವಂತೆ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ಹಿರಿಯ ಪತ್ರಕರ್ತ ಪಿ.ರಾಮಯ್ಯ, ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ, ಹಿರಿಯ ಕಾಂಗ್ರೆಸ್ ಮುಖಂಡ ಹನುಮಂತಪ್ಪ ಮತ್ತಿತರರಿದ್ದರು.