ಭೀಮ-ಕೊರೆಂಗಾವ್ ಪ್ರಕರಣದಲ್ಲಿ ಪ್ರಕಾಶ್ ಅಂಬೇಡ್ಕರ್ ಮತ್ತು ಜಿಗ್ನೇಶ್ ಮೇವಾನಿ ವಿರುದ್ಧ ಎಫ್‍ಐಆರ್: ಬಿಜೆಪಿ ಹಾಗೂ ಆರ್‍ಎಸ್‍ಎಸ್ ಹುನ್ನಾರ

 

ಬೆಂಗಳೂರು, ಜೂ.9- ಭೀಮ-ಕೊರೆಂಗಾವ್ ಪ್ರಕರಣದಲ್ಲಿ ಪ್ರಕಾಶ್ ಅಂಬೇಡ್ಕರ್ ಮತ್ತು ಜಿಗ್ನೇಶ್ ಮೇವಾನಿ ವಿರುದ್ಧ ದಾಖಲಿಸಿರುವ ಎಫ್‍ಐಆರ್ ಬಿಜೆಪಿ ಹಾಗೂ ಆರ್‍ಎಸ್‍ಎಸ್ ಹುನ್ನಾರ ಎಂದು ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂಘಟನೆ ಆರೋಪಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಮಾತನಾಡಿ, ಪ್ರಕಾಶ್ ಅಂಬೇಡ್ಕರ್‍ಮತ್ತು ಜಿಗ್ನೇಶ್ ಮೇವಾನಿ ಅವರ ವಿರುದ್ದ ದಾಖಲಾಗಿರುವ ಎಫ್‍ಐಆರ್ ಭೀಮ-ಕೊರಂಗಾವ್‍ನಲ್ಲಿ ನಡೆದ ದಲಿತರ ಮೇಲಿನ ಮಾರಣಾಂತಿಕ ದಾಳಿಗೆ ಸಂಬಂಧಿಸಿದ್ದು, ಆ ಘಟನೆ ನಡೆದ ವೇಳೆ ಜಿಗ್ನೇಶ್ ಮೇವಾನಿ ಮತ್ತು ಪ್ರಕಾಶ್ ಅಂಬೇಡ್ಕರ್ ಭೀಮ-ಕೊರೆಂಗಾವ್‍ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಹೇಳಿದರು.
ಈ ಸಂಬಂಧ ಚಳವಳಿಯ ಜವಾಬ್ದಾರಿ ಹೊತ್ತಿದ್ದ ರಾಜಕೀಯ ನಾಯಕ ಅಥಾವಳೆ ಅವರೇ ಕೊರೆಂಗಾವ್ ಪ್ರಕರಣಕ್ಕೂ ಪ್ರಕಾಶ್ ಅಂಬೇಡ್ಕರ್, ಮೇವಾನಿ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ದೊಡ್ಡಮಟ್ಟದಲ್ಲಿ ಜಿಗ್ನೇಶ್ ಮೇವಾನಿ ಹಾಗೂ ಪ್ರಕಾಶ್ ಅಂಬೇಡ್ಕರ್ ಅವರ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದೆ. ಮೋದಿ ಹತ್ಯೆಗೆ ಸಂಚು ರೂಪಿಸಿರುವವರ ಪಟ್ಟಿಯಲ್ಲಿ ಈ ಇಬ್ಬರ ಹೆಸರಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಮುವಾದಿ ವಿರೋಧಿ ಹೋರಾಟಗಾರರಾದ ಈ ಇಬ್ಬರು ನಾಯಕರ ಸಾಮಾಜಿಕ ಮಾನ್ಯತೆ ಹಾಳು ಮಾಡುವ ಉದ್ದೇಶವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ ಎಂದು ಎ.ಕೆ.ಸಿಬ್ಬಯ್ಯ ದೂರಿದರು.

ಕೊರೆಂಗಾವ್ ಪ್ರಕರಣದಲ್ಲಿ ದಲಿತ ಸಮುದಾಯದ ಮೇಲೆ ದಾಳಿ ನಡೆಸಲು ಕಾರಣರಾದ ಆರ್‍ಎಸ್‍ಎಸ್ ಮುಖಂಡರ ಮೇಲೆ ಎಫ್‍ಐಆರ್ ಹಾಕಬೇಕಿದೆ. ಗಲಭೆಗೆ ಸಂಬಂಧಿಸಿದಂತೆ ಪ್ರಚೋದನೆ ಮಾಡಿರುವ ಆರ್‍ಎಸ್‍ಎಸ್ ಹಾಗೂ ಬಿಜೆಪಿ ನಾಯಕರ ಸಭೆ ಮತ್ತು ದ್ವೇಷಪೂರಿತ ಭಾಷಣಗಳ ವಿಡಿಯೋ ದೃಶ್ಯಗಳನ್ನು ಸಾಕ್ಷಿಯಾಗಿ ಪರಿಗಣಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಕೂಡಲೇ ಅಪಪ್ರಚಾರ ನಿಲ್ಲಿಸದಿದ್ದರೆ ದೇಶದ ಎಲ್ಲಾ ರಾಜ್ಯಗಳ ಅಂಬೇಡ್ಕರ್ ವಾದಿಗಳು ಹಾಗೂ ಹೋರಾಟಗಾರರು ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ