ಕೆಲವು ವಿಶೇಷ ಗಿಡಮೂಲಿಕೆಗಳನ್ನು ನೋಡಿದರೆ ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಅಪನಂಬಿಕೆಯನ್ನು ಬುಡಸಮೇತ ಕಿತ್ತು ಬಿಸಾಡಬೇಕಾಗುತ್ತದೆ. ಅಂತಹುದೇ ಗಿಡಗಳು ಕಾಡರಿಶಿನ ಮತ್ತು ಕೂವೆಗಡ್ಡೆ (arrowroot) ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕಾಗಿದೆ. ಕಾಡರಿಶಿನ ಮತ್ತು ಕೂವೆಗಡ್ಡೆ ಎರಡೂ ಒಂದೇ ಎಂಬ ಭಾವನೆ, ನಂಭಿಕೆ ಬಹಳ ಜನರ ಮನಸ್ಸಿನಲ್ಲಿದೆ. ಇವೆರಡೂ ಬೇರೆಬೇರೆ ಗಿಡಗಳು. ಇವೆರಡೂ ಗಿಡಗಳೂ Plantae ಸಸ್ಯಸಾಮ್ರಾಜ್ಯಕ್ಕೆ ಸೇರಿದ್ದಾಗಿದ್ದು Zingiberales ಎಂಬ ವಿಭಾಗದ್ದಾಗಿದ್ದರೂ, ಕಾಡರಿಶಿನ ಸಸ್ಯಶಾಸ್ತ್ರಿಯವಾಗಿ Zingiberaceae ಕುಟುಂಬಕ್ಕೆ ಸೇರಿದ್ದಾಗಿದ್ದು Curcuma Aromatica ಎಂದು ವೈಜ್ಞಾನಿಕವಾಗಿ ಕರೆಯಲ್ಪಟ್ಟರೆ, ಕೂವೆಗಡ್ಡೆ ಸಸ್ಯಶಾಸ್ತ್ರಿಯವಾಗಿ Marantaceae ಕುಟುಂಬಕ್ಕೆ ಸೇರಿದ್ದಾಗಿದ್ದು Maranta Arundinacea ಎಂದು ವೈಜ್ಞಾನಿಕವಾಗಿ ಕರೆಯಲ್ಪಡುತ್ತದೆ. (ಸಾರ್ವತ್ರಿಕವಾಗಿ ಎಲ್ಲರಿಗೂ ಚಿರಪರಿಚಿತವಾದ ಅರಿಶಿನಕ್ಕೆ (Curcuma Longa) ಈ ಕಾಡರಿಶಿನ ಹತ್ತಿರದ ಸಂಬಂಧಿಯಾದರೂ ಬಣ್ಣ, ರುಚಿ, ಔಷಧೀಯ ಗುಣಗಳಲ್ಲಿ ವ್ಯತ್ಯಾಸವಿದೆ)
ಆಯುರ್ವೇದ ಹಾಗೂ ಚೈನಾದ ವೈದ್ಯಪದ್ದತಿಗಳಲ್ಲಿ ಬಳಕೆಯಲ್ಲಿರುವ ಈ ಗಿಡಗಳು ನೋಡಲು ಕೂಡ ಬೇರೆಬೇರೆ ತರಹವೇ ಇರುತ್ತವೆ. ಅವುಗಳ ವ್ಯತ್ಯಾಸ ಅನುಭವಿಗಳಿಗೆ ತಕ್ಷಣ ಗೊತ್ತಾಗುತ್ತದೆ.
• ಕಾಡರಿಶಿನದ ಗಡ್ಡೆಗಳು ಗುಂಡುಗುಂಡಾಗಿ ಅರಿಶಿನದಂತೆಯೇ ಇದ್ದು, ಗಡ್ಡೆಯ ಮೇಲ್ಮೈಯಿಂದ ಮರಿಗಳು ಕಾಣಿಸಿಕೊಳ್ಳುತ್ತವೆ, ಕೂವೆಗಡ್ಡೆಯ ಗಡ್ಡೆಗಳು ಮೂಲಂಗಿಯಂತೆ ಉದ್ದವಾಗಿದ್ದು , ಗಡ್ಡೆಯ ಮೇಲ್ಮೈಯಲ್ಲಿ ಕಬ್ಬಿನ ಗೆಣ್ಣಿನಂತಹ ರಚನೆಗಳಿರುತ್ತವೆ.
• ಕಾಡರಿಶಿನದ ಎಲೆಗಳು ಅರಿಶಿನದಂತೆಯೇ ಕಾಂಡದಿಂದ ತುದಿಯವರೆಗೆ ಒಂದೇ ಇದ್ದು, ದಂಟು ಮತ್ತು ಎಲೆ ಸೇರಿಕೊಂಡಂತೆ ಇರುತ್ತದೆ. ಆದರೆ ಕೂವೆಗಡ್ಡೆಯಲ್ಲಿ ಕಾಂಡದಿಂದ ಎಲೆಯವರೆಗೆ ದಂಟು ಇದ್ದು , ನಂತರ ಎಲೆಯ ಬುಡದಲ್ಲಿ ಬಿಳಿಯ ಬಣ್ಣದ ತೊಟ್ಟು, ಆ ನಂತರ ಎಲೆ ಇರುತ್ತದೆ.
• ಬೇರುಗಳ ರಚನೆಯಲ್ಲಿಯೂ ವ್ಯತ್ಯಾಸವಿದ್ದು, ಕೂವೆಗಡ್ಡೆಯ ಬೇರುಗಳು ತೆಳುವಾಗಿಯೂ, ದಟ್ಟವಾಗಿಯೂ ಇದ್ದು, ಗಡ್ದೆಗಳಲ್ಲಿ ನೀರಿನ ಅಂಶ ಜಾಸ್ತಿ ಇರುತ್ತದೆ. ಆದರೆ ಕಾಡರಿಶಿನದ ಬೇರುಗಳು ಕೂವೆಗಡ್ಡೆಯ ಬೇರುಗಳಿಗೆ ಹೋಲಿಸಿದಾಗ ದಪ್ಪವಾಗಿ, ವಿರಳವಾಗಿ ಇದ್ದು ಗಡ್ದೆಗಳಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ.
• ಕಾಡರಿಶಿನದ ಗಡ್ಡೆಗಳು ಬಿಳಿಯ ಬಣ್ಣದಲ್ಲಿ ಇರುತ್ತವೆ. ಕೂವೆಗಡ್ಡೆಯ ಗಡ್ಡೆಗಳು ಕಂದು ಮಿಶ್ರಿತ ಬಿಳಿ, ನಸುಗೆಂಪು ಮಿಶ್ರಿತ ಬಿಳಿಯ ಬಣ್ಣದಲ್ಲಿ ಇರುತ್ತವೆ.
• ಕಾಡರಿಶಿನದ ಗಿಡ ಸಾಧಾರಣ ಒಂದೂವರೆಯಿಂದ ಎರಡು ಅಡಿ ಎತ್ತರ ಬೆಳೆಯುತ್ತದೆ. ಕೂವೆಗಡ್ಡೆಯ ಗಿಡ ಸಾಧಾರಣ ಎರಡರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ
ಪಶ್ಚಿಮಘಟ್ಟ ಪ್ರದೇಶಗಳು ಹಾಗೂ ಹಿಮಾಲಯದ ಭಾಗಗಳಲ್ಲಿ ದೊರೆಯುವ ಕಾಡರಿಶಿನದ ಮೂಲ ದಕ್ಷಿಣ ಏಷ್ಯಾ ಹಾಗೂ ಕೂವೆಗಡ್ಡೆಯ ಮೂಲ ದಕ್ಷಿಣ ಅಮೇರಿಕಾ ಎಂದು ನಂಬಲಾಗಿದೆ. ಅದೇನೇ ಇದ್ದರೂ ಭಾರತದಾದ್ಯಂತ ಹಲವು ಭಾಗಗಳಲ್ಲಿ ಇವೆರಡೂ ಗಡ್ಡೆಗಳನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ.
ಸಂಸ್ಕರಿಸಿ ಹಿಟ್ಟು ಮಾಡುವ ವಿಧಾನ ಮಾತ್ರ ಇವೆರಡೂ ಗಡ್ಡೆಗಳಿಗೆ ಹೆಚ್ಚುಕಡಿಮೆ ಒಂದೇ ರೀತಿಯಾಗಿದೆ.
ಸಾಧಾರಣವಾಗಿ ಜನವರಿ ತಿಂಗಳಲ್ಲಿ ಚೆನ್ನಾಗಿ ಬೆಳೆದ ಗಡ್ಡೆಗಳನ್ನು ಕಿತ್ತು, ಮಣ್ಣಿನ ಅಂಶ ಹೋಗುವಂತೆ ಸ್ವಚ್ಚವಾಗಿ ತೊಳೆಯಬೇಕು. ನಂತರ ಚಿಕ್ಕಚಿಕ್ಕ ತುಂಡುಗಳಾಗಿ ಕತ್ತರಿಸಿ, ಆ ಚೂರುಗಳನ್ನು ಚೆನ್ನಾಗಿ ರುಬ್ಬಿ, ಆ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ, ತೆಳು ಬಟ್ಟೆಯಲ್ಲಿ ಸೋಸಬೇಕು. ಉಳಿದ ಜಿಗುಟನ್ನು ಚೆನ್ನಾಗಿ ಹಿಂಡಿ, ಹಿಟ್ಟು ಮಿಶ್ರಿತ ನೀರನ್ನು ಹಣಿಯಲು ಬಿಡಬೇಕು. ಕೆಲ ಗಂಟೆಗಳ ನಂತರ ಹಿಟ್ಟು ತಳದಲ್ಲಿ ಕೂತಿರುತ್ತದೆ. ಈಗ ಮೇಲಿನ ನೀರನ್ನು ಚೆಲ್ಲಿ, ಮತ್ತೆ ಮೂರ್ನಾಲ್ಕು ಬಾರಿ ಈ ಪ್ರಕ್ರಿಯೆಯನ್ನು ಮಾಡಬೇಕು. ಸಂಪೂರ್ಣವಾಗಿ ಕಲ್ಮಶಗಳು ಹೋದ ನಂತರ ಆ ಹಿಟ್ಟನ್ನು ನಾಲ್ಕಾರು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ನೀರಿನಂಶ ಒಣಗಿ, ಪುಡಿಪುಡಿಯಾದ ಹಿಟ್ಟನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು.
ಔಷಧೀಯ ಗುಣಗಳು ; ಕಾಡರಿಶಿನ
• ಅಜೀರ್ಣ, ವಾಯುಪ್ರಕೋಪ,ಹೊಟ್ಟೆನೋವು, ಭೇಧಿ, ಅತಿಸಾರ ಭೇಧಿಯಂತಹ ಕಾಯಿಲೆಗಳಿಗೆ ತಕ್ಷಣ ಪರಿಣಾಮ ನೀಡುತ್ತದೆ.
• ಕಡೆದು ಬೆಣ್ಣೆ ತೆಗೆದ ಮಜ್ಜಿಗೆಯ ಜೊತೆ ಸೇರಿಸಿ ಕುಡಿದಲ್ಲಿ ಉಷ್ಣ ನಿವಾರಕವಾಗಿದೆ.
• ಉರಿಯೂತ, ಬಾವು ನಿವಾರಕ ಹಾಗೂ ಗಾಯಗಳನ್ನು ಗುಣಪಡಿಸುವ ಗುಣ ಹೊಂದಿದೆ.
• ಉತ್ಕರ್ಷಣ ನಿರೋಧಕ (Antioxidants) ಗುಣವನ್ನು ಹೊಂದಿದೆ.
• ಕ್ಯಾನ್ಸರ್ ನಿರೋಧಕ ಗುಣವನ್ನು ಹೊಂದಿದೆ.
• ರಕ್ತತಟ್ಟೆಗಳ ಕ್ಷಯಿಸುವಿಕೆಯನ್ನು ಕಡಿಮೆ ಮಾಡುತ್ತದೆ.
• ಬ್ಯಾಕ್ಟಿರಿಯಾ ನಿರೋಧಕ ಗುಣವನ್ನು ಹೊಂದಿದೆ.
• ಕಿಡ್ನಿಯಲ್ಲಿ ವಿಷಕಾರಿ ಪದಾರ್ಥಗಳು ಸಂಗ್ರಹವಾಗದಂತೆ ತಡೆಯುವ ಗುಣ ಹೊಂದಿದೆ.
• ಸೊಳ್ಳೆನಿವಾರಕ ಗುಣವನ್ನು ಹೊಂದಿದೆ.
ಔಷಧೀಯ ಗುಣಗಳು ; ಕೂವೆಗಡ್ಡೆ (arrowroot)
• ಅನಾರೋಗ್ಯದ ಸಮಯದಲ್ಲಿ ಔಷಧಿಯೂ ಹೌದು, ಆಹಾರವೂ ಹೌದು.
• ಜ್ವರ, ಮೂಲವ್ಯಾದಿ, ಉರಿಮೂತ್ರ, ಆಮಶಂಕೆ, ಇತ್ಯಾದಿ ಸಮಯದಲ್ಲಿ ಬಾರ್ಲಿ ನೀರಿನಂತೆ ಸೇವಿಸಬಹುದು.
• ಎಲಕ್ಕಿಯೊಂದಿಗೆ ಮಿಶ್ರ ಮಾಡಿದ ಕೂವೆಯ ಪಾನೀಯ ಹೊಟ್ಟೆಯನ್ನು ತಂಪಾಗಿಸುತ್ತದೆ.
• ಅತ್ಯುತ್ತಮ ಶಿಶು ಆಹಾರ. ಬಾಲಾಹಾರ.
• ಬಾಳಂತಿಯರಿಗೆ ಎದೆಹಾಲು ಹೆಚ್ಚಿಸಲು ಸಹಕಾರಿ.
• ಗರ್ಭಿಣಿಯರಿಗೂ ದೇಹಕ್ಕೆ ತಂಪು, ಶಕ್ತಿದಾಯಕ.
• ನ್ಯೂಡಲ್ಸ್, ಹಪ್ಪಳ, ಸಂಡಿಗೆ, ಬಾಳಕ, ಹಲ್ವಾ, ದೋಸೆ, ಬಿಸ್ಕತ್, ಐಸ್ಕ್ರಿಮ್ ಇತ್ಯಾದಿಗಳನ್ನು ತಯಾರಿಸಬಹುದು.
• ಇದೊಂದು ಗ್ಲುಟೆನ್ ಮುಕ್ತ ಆಹಾರವಾಗಿದ್ದು ಗ್ಲುಟೆನ್ ಅಲರ್ಜಿ ಇರುವವರೂ ಬಳಸಬಹುದಾಗಿದೆ.
• ಹಣ್ಣಿನ ಮೊರಬ್ಬ, ಕೆಚಪ್, ಸಾಸ್ ಇತ್ಯಾದಿಗಳ ದ್ರಾವಣವನ್ನು ಮಂದಗೊಳಿಸಲು ಕೂಡಾ ಬಳಸುತ್ತಾರೆ.
• ಕೊಬ್ಬುರಹಿತ ಮತ್ತು ಕಡಿಮೆ ಕ್ಯಾಲರಿಯ ಕಾರಣ ತೂಕ ಕಡಿಮೆ ಮಾಡುವ ಉದ್ದೇಶಕ್ಕೂ ಆಹಾರವಾಗಿ ಬಳಸುತ್ತಾರೆ.
• ಚಿಕ್ಕಮಕ್ಕಳು ಹಾಗೂ ದೊಡ್ಡವರ ಟಾಲ್ಕಂ ಪೌಡರ್ ಆಗಿಯೂ ಹಲವೆಡೆ ಬಳಸುತ್ತಾರೆ. ಇಷ್ಟಲ್ಲದೇ ..
• ಇದರ ಮಂದವಾಗುವ ಗುಣದ ಕಾರಣದಿಂದ ಇದನ್ನು ಹೇರ್ ಡೈಗಳಲ್ಲೂ ಬಳಸುತ್ತಾರೆ.
ಇವುಗಳ ಸಾರ್ವತ್ರಿಕ ಉಪಯೋಗ, ಜನರಲ್ಲಿ ಹೆಚ್ಚುತ್ತಿರುವ ಜಾಗೃತಿ , ಹೆಚ್ಚುತ್ತಿರುವ ಆಯುರ್ವೇದದ ಕಡೆಗಿನ ಜನರ ಒಲವು, ಬದಲೀ ಬೆಳೆಗಳ ಕಡೆಗಿನ ನಿರಂತರ ಹುಡುಕಾಟ ಇತ್ಯಾದಿಗಳನ್ನು ಗಮನಿಸಿದರೆ, ಈ ಹಿತ್ತಲ ಗಿಡಗಳು ವಾಣಿಜ್ಯ ಬೆಳೆಗಳಾಗುವ ಸಾಮರ್ಥ್ಯ, ಯೋಗ್ಯತೆ ಗಳಿಸಿಕೊಂಡಿವೆ ಎನ್ನಿಸುತ್ತದೆ. ಶತಶತಮಾನಗಳಿಂದ ಭಾರತೀಯ ತಾಯಂದಿರು ತಮ್ಮ ಮುಂದಿನ ಪೀಳಿಗೆಗೆ ಹರಿಸುತ್ತ ಬಂದ ಜ್ಞಾನವನ್ನು ಚಿಕ್ಕ ಕವನದ ರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಓದಿ.
ಕಾಡ ಅರಿಶಿನದೊಡವೇ
ಕೂವೆ ಕಾದಿಡು ಮಗಳೇ
ಕಾಯುವುದೂ ಕಾಯವನೂ
ಎಲ್ಲ ಸಮಯದಲೂ [1]
ಭೂಮ್ತಾಯಿ ಹೊಟ್ಟೆಯಲಿ
ಹುಟ್ಟಿಹುದೂ ಸಣ್ಣ ಗಿಡವೂ
ಗಿಡಸಣ್ಣವೇ ಹೊರತು
ಗುಣವಲ್ಲ ಮಗಳೇ [2]
ಗಿಡದ ಗಡ್ಡೆಯ ಕಿತ್ತೂ
ತುಂಡರಿಸಿ ಗುಡ್ಡೆಯನೂ
ಬೀಸೀ ಕಾಸೀ ಸೊಸೀ
ಒಣಗಿಸೀ ತುಂಬಿಡೂ [3]
ಶೂಲೆ ಭಾದೆಯೂ ಭೇಧಿ
ಹಲವು ರೋಗಕೆ ಅದುವೂ
ಮದ್ದಹುದು, ಮುದ್ದಹುದೂ
ಶುದ್ಧ ಔಷಧಿಯಹುದೂ [4]