![cavinkare-disability-awards-2018](http://kannada.vartamitra.com/wp-content/uploads/2018/02/cavinkare-disability-awards-2018-678x381.jpg)
ಚೆನ್ನೈ ಫೆ.10-ದೈಹಿಕ ನ್ಯೂನ್ಯತೆಗಳ ನಡುವೆಯೂ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಆರು ಮಂದಿಗೆ ಕೆವಿನ್ಕೇರ್ ಎಬಿಲಿಟಿ ಅವಾರ್ಡ್-2018 ನೀಡಲಾಗಿದೆ.
ಚೆನ್ನೈನ ಸರ್ ಮುತಾ ವೆಂಕಟಸುಬ್ಬ ರಾವ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕೆವಿನ್ಕೇರ್ ಪ್ರೈ.ಲಿ. ಮತ್ತು ರಾಷ್ಟ್ರೀಯ ಮಿಶ್ರ ಅಂಗವೈಕಲ್ಯ ಸ್ವಯಂ ಸೇವಾ ಸಂಸ್ಥೆ ಎಬಿಲಿಟಿ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಕೆವಿನ್ಕೇರ್ ಎಬಿಲಿಟಿ ಅವಾರ್ಡ್ ಪುರಸ್ಕಾರ ನೀಡಲಾಗುತ್ತದೆ. 2003ರಲ್ಲಿ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಯಿತು. ವಿಕಲಾಂಗರ ಸುಪ್ತ ಪ್ರತಿಭೆಗಳನ್ನು ಹಾಗೂ ಅಪ್ರತಿಮ ಸಾಮರ್ಥ್ಯಗಳನ್ನು ಬೆಳಕಿಗೆ ತರುವ ಜತೆಗೆ ಅವರ ಸಾಧನೆಗಳನ್ನು ಪ್ರದರ್ಶಿಸುವ ಹಾಗೂ ಸವಾಲಿನ ರೂಢಿಗತ ಗ್ರಹಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪ್ರಶಸ್ತಿ ಆರಂಭಿಸಲಾಗಿದೆ.
ಎಬಿಲಿಟಿ ಫೌಂಡೇಷನ್ ಸಂಸ್ಥಾಪಕಿ ಜಯಶ್ರೀ ರವೀಂದ್ರನ್ ಮಾತನಾಡಿ, ಅಂಗವಿಕಲತೆಯ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಸಾಮಾನ್ಯ ಜನರ ಮನಸ್ಸನ್ನು ಬದಲಿಸಲು ಮೊದಲು ನಾವು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದುದು ಬಹಳ ಮುಖ್ಯ ಎಂದು ನಾವು ನಂಬಿದ್ದೇವೆ ಎಂದರು.
ಮಹಾಂತೇಶ್, ಡಾ. ಶೃತಿ ಮೋಹಪಾತ್ರ, ರಾಜು ರಾಮೇಶ್ವರ್ ಉಪ್ರಾದೆ, ಗೌರಿ ಶೇಖರ್ ಗಾಡ್ಗಿಲ್, ಜಾಸ್ಮಿನಾ ಖನ್ನಾ, ಡಾ. ರೋಷನ್ ಜಾವೇದ್ ಶೇಖ್ ಇವರುಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಿಕಲಚೇತನತೆಯನ್ನು ಮೆಟ್ಟಿ ನಿಂತಿದ್ದಾರೆ. ಇವರ ಸಾಧನೆ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.