ತುಮಕೂರು, ಜೂ.5- ಬಡ್ಡಿಹಳ್ಳಿ, ಗುಂಡ್ಲಮ್ಮನ ಕೆರೆ ಕೋಡಿ ಸೇರಿದಂತೆ ತುಮಕೂರು ನಗರದಲ್ಲಿ ಮಳೆಯಿಂದ ಹಾನಿಗೆ ಒಳಗಾಗುವ ತಗ್ಗು ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿ ನೀಡಿ ಪರಿಶೀಲಿಸಿದರು.
ಮೊದಲಿಗೆ ಪಾಲಿಕೆ ಆಯುಕ್ತರು, ಎಂಜಿನಿಯರ್‍ಗಳು, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಬಡ್ಡಿಹಳ್ಳಿಯಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ತೆರಳಿದ ಉಸ್ತುವಾರಿ ಕಾರ್ಯದರ್ಶಿಗಳು, ಮಳೆಗಾಲದ ಸಮಯದಲ್ಲಿ ಪ್ರತಿ ಬಾರಿ ಈ ಶಾಲೆಯ ಆವರಣಕ್ಕೆ ನೀರು ನುಗ್ಗುತ್ತಿದೆ. ಯಾವುದೇ ಕಾರಣಕ್ಕೂ ನೀರು ಶಾಲೆಯ ಆವರಣ ಪ್ರವೇಶಿಸಬಾರದು. ಆ ರೀತಿಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಮಳೆಗಾಲದಲ್ಲಿ ಬಡ್ಡಿಹಳ್ಳಿ ಕೆರೆಯಿಂದ ಶಾಲೆಯ ಆವರಣಕ್ಕೆ ಹಾಗೂ ಕೊಠಡಿಗಳಿಗೆ ನೀರು ಹರಿಯದಂತೆ ಬಂಡು ನಿರ್ಮಿಸಲಾಗಿದೆ. ಆದರೂ ಕೆರೆಯ ಆವರಣದಲ್ಲಿ ಶಾಲೆ ಇರುವುದರಿಂದ ನೀರು ಜಿನುಗುತ್ತದೆ ಎಂದು ಎಂಜಿನಿಯರ್‍ಗಳು ಉಸ್ತುವಾರಿ ಕಾರ್ಯದರ್ಶಿಗಳಿಗೆ ತಿಳಿಸಿದರು.
ಯಾವುದೇ ಕಾರಣಕ್ಕೂ ನೀರು ಶಾಲೆಯೊಳಗೆ ಹರಿಯಬಾರದು ಹಾಗೂ ಜಿನುಗಬಾರದು. ಶಾಶ್ವತ ಪರಿಹಾರ ಕೈಗೊಳ್ಳಬೇಕು. ಕೆರೆಯಿಂದ ಹರಿದು ಹೋಗುವ ನೀರು ಸರಾಗವಾಗಿ ರಾಜ ಕಾಲುವೆ ಮೂಲಕ ಹೊರ ಹೋಗುವಂತೆ ಕಾಲುವೆ ನಿರ್ಮಾಣ ಮಾಡಬೇಕು. ಇಂದೇ ಜೆಸಿಬಿ ಮೂಲಕ ರಾಜಕಾಲುವೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಎಂಜಿನಿಯರ್‍ಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳ ಸಭೆ: ಸಿಟಿ ರೌಂಡ್ಸ್‍ಗೂ ಮುನ್ನ ಜಿಲ್ಲಾಧಿಕಾರಿಗಳು, ಸಿಇಒ, ಕೃಷಿ, ತೋಟಗಾರಿಕೆ, ಪಾಲಿಕೆ, ಆರೋಗ್ಯ ಮತ್ತಿತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಳೆಯಿಂದ ಜಿಲ್ಲೆಯಲ್ಲಾಗಿರುವ ಹಾನಿ, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು, ರೈತರ ಆತ್ಮಹತ್ಯೆ, ಆರೋಗ್ಯ, ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.