ಕೊಯಮುತ್ತೂರು : ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುವ ಘಟಕವೊಂದನ್ನು ಪತ್ತೆ ಹಚ್ಚಿರುವ ಪೊಲೀಸರು ಒಂದು ಕೋಟಿ ರೂ. ಮುಖಬೆಲೆಯ 6,000 ನಕಲಿ ನೋಟುಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಇಂದು ನಸುಕಿನ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರವಾಹನದಲ್ಲಿ ಓರ್ವ ವ್ಯಕ್ತಿ 2,000 ರೂ.ಮುಖ ಬೆಲೆಯ ಭಾರೀ ಪ್ರಮಾಣದ ನೋಟುಗಳನ್ನು ಒಯ್ಯುತ್ತಿದ್ದುದು ಪತ್ತೆಯಾಯಿತು.
ಪೊಲೀಸರು ವಶಪಡಿಸಿಕೊಂಡಿರುವ ಈ ನೋಟುಗಳ ಮೌಲ್ಯ 83 ಲಕ್ಷ ರೂ.ಗಳೆಂದು ಅಧಿಕಾರಿ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಪೊಲೀಸರು ತೀವ್ರವಾಗಿ ಪ್ರಶ್ನಿಸಿದಾಗ ಆತ ನೀಡಿದ ಮಾಹಿತಿಯ ಪ್ರಕಾರ ನಗರ ಹೊರವಲಯದ ವೇಲಾಂಡಿಪಾಳಯಂ ನಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ ಸುಮಾರು 20 ಲಕ್ಷ ರೂ. ಮೌಲ್ಯದ ಇನ್ನೂ ಹೆಚ್ಚಿನ ಪ್ರಮಾಣದ ನಕಲಿ ನೋಟುಗಳನ್ನು ವಶಪಡಿಸಿಕೊಂಡರು.
ಜತೆಗೆ ಒಂದು ಕಂಪ್ಯೂಟರ್, ಪ್ರಿಂಟರ್, ಕಟ್ಟಿಂಗ್ ಮಶೀನ್ ಇತ್ಯಾದಿ ಸಲಕರಣೆಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡರು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.