ಉತ್ತರ ಪ್ರದೇಶದಲ್ಲಿ ಮತ್ತೆ ಬಿರುಗಾಳಿ

ಲಖನೌ: ಉತ್ತರ ಪ್ರದೇಶದ ಉತ್ತರ ಭಾಗದಲ್ಲಿ ಬೀಸಿರುವ ಭೀಕರ ಬಿರುಗಾಳಿಗೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಶುಕ್ರವಾರ ರಾತ್ರಿ ಬೀಸಿದ್ದ ಬಿರುಗಾಳಿಗೆ ಮೊರದಾಬಾದ್‌, ಮುಸಾಫರ್‌ನಗರ, ಮೀರತ್‌ನಲ್ಲಿ ತಲಾ ಮೂವರು ಹಾಗೂ ಸಂಭಲ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ.

ಕೆಲವೆಡೆ ಮನೆಗಳ ಛಾವಣಿ ಉರುಳಿ ಬಿದ್ದಿದ್ದು, ಇನ್ನು ಕೆಲ ಭಾಗದಲ್ಲಿ ಶೆಡ್‌ನ ಟಿನ್‌ ಶೀಟ್‌ ಬಿದ್ದಿರುವುದು ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಬಿರುಗಾಳಿಯಿಂದ ಬಾಧಿತಗೊಂಡಿರುವ ಪ್ರದೇಶಗಳಲ್ಲಿ ಈಗಾಗಲೇ ಪರಿಹಾರ ಕಾರ್ಯಾಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, 24 ಗಂಟೆಯೊಳಗೆ ಎಲ್ಲ ಸಂತ್ರಸ್ತರಿಗೆ ಅಗತ್ಯ ನಾಗರಿಕ ಸೌಲಭ್ಯಗಳನ್ನು ಒದಗಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮೃತ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದು, ಶೀಘ್ರದಲ್ಲೇ ಪರಿಹಾರ ಮೊತ್ತ ಮನೆಗೆ ತಲುಪಲಿದೆ ಎಂದು ರಿಲೀಫ್‌ ತಂಡದ ಮುಖ್ಯಸ್ಥ ಸಂಜಯ್‌ ಕುಮಾರ್‌ ತಿಳಿಸಿದ್ದಾರೆ.

ಕಳೆದ 1 ತಿಂಗಳಿನಿಂದ ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಇನ್ನಿತರ ಭಾಗದಲ್ಲಿ ಬಿರುಗಾಳಿಯಿಂದ ಅನೇಕ ಜನ ಸಂಕಷ್ಟಕ್ಕೀಡಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕನಿಷ್ಠ 150 ಮಂದಿ ಬಿರುಗಾಳಿಯಿಂದ ಅಸುನೀಗಿದ್ದಾರೆ ಎಂದು ಅವರು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ