ಮಲ್ಟಿಪಲ್ ಸ್ಕ್ಲೆ ೈರೋಸಿಸ್ (ಎಂಎಸ್) ಎಂಬುದು ಕೇಂದ್ರೀಯ ನರ ಪದ್ಧತಿಯಲ್ಲಿ ಕಂಡು ಬರುವ ಗಂಭೀರ ಸ್ವರೂಪದ ರೋಗ: ನರ ವಿಜ್ಞಾನಿ ಡಾ.ರಾಜೇಶ್ ಬಿ.ಅಯ್ಯರ್

 

ಬೆಂಗಳೂರು, ಮೇ 31-ಮಲ್ಟಿಪಲ್ ಸ್ಕ್ಲೆ ೈರೋಸಿಸ್ (ಎಂಎಸ್) ಎಂಬುದು ಕೇಂದ್ರೀಯ ನರ ಪದ್ಧತಿಯಲ್ಲಿ ಕಂಡು ಬರುವ ಗಂಭೀರ ಸ್ವರೂಪದ ರೋಗವಾಗಿದೆ ಎಂದು ನಗರದ ವಿಕ್ರಂ ಆಸ್ಪತ್ರೆಯ ನರ ವಿಜ್ಞಾನಿ ಡಾ.ರಾಜೇಶ್ ಬಿ.ಅಯ್ಯರ್ ತಿಳಿಸಿದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎನಿಸಿರುವ ವಿಕ್ರಮ್ ಆಸ್ಪತ್ರೆ ಮಲ್ಟಿಪಲ್ ಸ್ಕ್ಲೆರೋಸಿಸ್ ಸೊಸೈಟಿ ಆಫ್ ಇಂಡಿಯಾ (ಎಂಎಸ್‍ಎಸ್‍ಐ) ಸಹಯೋಗದಲ್ಲಿ ವಿಶ್ವ ಮಲ್ಟಿಪಲ್ ಸ್ಕ್ಲೆರೋಸಿಸ್ ದಿನದ ಅಂಗವಾಗಿ ಆಯೋಜಿಸಿದ್ದ ವಿಶೇಷ ಆರೋಗ್ಯ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ 20 ರಿಂದ 40ರ ವಯೋಮಾನದ ಯುವಕರಲ್ಲಿ ಎಂಎಸ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮಹಿಳೆಯರಲ್ಲೇ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾರ್ಮೋನ್ ಏರಿಳಿತಗಳಿಂದಾಗಿ ಇದು ಮಹಿಳೆಯರನ್ನು ಕಾಡುವುದು ಹೆಚ್ಚು ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತದಂತಹ ದೇಶದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳ ಲಾರಂಭಿಸಿದೆ. ರೋಗದ ಆರಂಭದಲ್ಲಿಯೇ ತಪಾಸಣೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಅಂಗವೈಕಲ್ಯತೆಯನ್ನು ತಡೆಯಬಹುದು. ಎಂದಿನಂತೆ ದೈನಂದಿನ ಚಟುವಟಿಕೆಗಳನ್ನು ಮುಂದುವರೆಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮತ್ತೋರ್ವ ನರ ವಿಜ್ಞಾನಿ ಡಾ. ಜಯಚಂದ್ರನ್.ಆರ್ ಅವರು ಮಾತನಾಡಿ, ಈ ಮಲ್ಟಿಪಲ್ ಸ್ಕ್ಲೆರೋಸಿಸ್ ರೋಗದ ಗಂಭೀರತೆಗೆ ಅನುಗುಣವಾಗಿ ಮೂರು ವಿಭಾಗದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದಕ್ಕೆ ಪೂರಕವಾಗಿ ಬೋನ್ ಮ್ಯಾರೋ ಕಸಿ ಮಾಡುವ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಈ ರೋಗದಿಂದ ನರಳುತ್ತಿರುವವರು ರೋಗವನ್ನು ತಡೆಗಟ್ಟಬಹುದು ಮತ್ತು ಇದಕ್ಕೆ ಬಹು ವಿಧದ ಚಿಕಿತ್ಸಾ ವಿಧಾನಗಳಿವೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಸೋಮೇಶ್ ಮಿತ್ತಲ್ ಅವರು ಮಾತನಾಡಿ, ಮಲ್ಟಿಪಲ್ ಸ್ಕ್ಲೆರೋಸಿಸ್ ರೋಗದ ಬಗ್ಗೆ ನಾವು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಈ ರೋಗ ನಿವಾರಣೆಗೆ ಪ್ರತಿದಿನ ಯೋಗ, ವ್ಯಾಯಾಮ, ಧ್ಯಾನ, ಧನಾತ್ಮಕ ವರ್ತನೆ ಸೇರಿದಂತೆ ಹಲವು ವಿಧಾನಗಳನ್ನು ರೂಢಿಸಿಕೊಂಡಲ್ಲಿ ಎಂಎಸ್ ರೋಗವನ್ನು ದೂರವಿಡಬಹುದು ಎಂದು ಇದೇ ಸಂದರ್ಭದಲ್ಲಿ ತಜ್ಞ ವೈದ್ಯರು ಸಲಹೆ ನೀಡಿದರು.
ಈ ಶಿಬಿರದಲ್ಲಿ 50 ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್(ಎಂಎಸ್)ಗೆ ತುತ್ತಾದ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಕ್ರಮ್ ಆಸ್ಪತ್ರೆ ಎಂಎಸ್‍ಎಸ್‍ಐ ಮೂಲಕ ವ್ಹೀಲ್‍ಚೇರ್‍ಗಳನ್ನು ವಿತರಿಸಿತು.

ಎಂಎಸ್‍ಎಸ್‍ಐನ ಬೆಂಗಳೂರು ಚಾಪ್ಟರ್‍ನ ಮುಖ್ಯಸ್ಥ ಶಂಕರ್ ಅವರು ಇದೇ ವೇಳೆ ಮಾತನಾಡಿ, ಈ ಮಾರಕ ಎನಿಸುವ ಎಂಎಸ್ ರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿಕ್ರಮ್ ಆಸ್ಪತ್ರೆಯ ತಂಡ ಹೆಜ್ಜೆ ಇಟ್ಟಿರುವುದು ಸ್ತುತ್ಯಾರ್ಹವಾಗಿದೆ. ಎಂಎಸ್ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ವ್ಹೀಲ್‍ಚೇರ್ ನೀಡಿರುವುದು ಮತ್ತು ಈ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದಕ್ಕೆ ನಾವು ವಿಕ್ರಮ್ ಆಸ್ಪತ್ರೆಯ ತಂಡಕ್ಕೆ ಧನ್ಯವಾದಗಳನ್ನು ತಿಳಿಸಲು ಹರ್ಷವಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ