ಬೆಂಗಳೂರು:ಮೇ-31: ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಸೇರಿ ಡಿಕೆ ಸಹೋದರರ ಆಪ್ತರ 11 ಜನರ ವಿರುದ್ಧ ಸಿಬಿಐ ಸರ್ಚ್ ವಾರಂಟ್ ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಮನೆ, ಕಛೇರಿಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಸರ್ಚ್ ವಾರಂಟ್ ಜಾರಿಗೊಳಿಸಿದೆ. ಸಿಬಿಐನ 82 ನೇ ಕೋರ್ಟ್ನ ನ್ಯಾಯಾಧೀಶೆ ಪುಷ್ಪಾಂಜಲಿದೇವಿ ಈ ಆದೇಶ ಹೊರಡಿಸಿದ್ದಾರೆ. ಡಿಕೆಶಿ ಆಪ್ತರಿಗೆ ಸೇರಿದ ಹನ್ನೊಂದು ಸ್ಥಳಗಳಲ್ಲಿ ಶೋಧ ನಡೆಸಲು ಸರ್ಚ್ ವಾರಂಟ್ಗೆ ಆದೇಶಿಸಲಾಗಿದೆ. ಈ ಆದೇಶದಲ್ಲಿ ಎಲ್ಲಿಯೂ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಹೆಸರು ಇಲ್ಲ ಎಂದು ತಿಳಿದು ಬಂದಿದೆ.
ಈ ಆದೇಶದ ಹಿನ್ನೆಲೆಯಲ್ಲಿಯೇ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಇಂದು ಬೆಳ್ಳಂಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದ ನಂತರ ಆಪ್ತರ ಮನೆಗಳ ಮೇಲೆಯೂ ದಾಳಿ ನಡೆದಿತ್ತು. ದಾಳಿ ವೇಳೆ ಆಪ್ತರ ಮನೆಗಳಲ್ಲಿ ಹಳೆಯ ನೋಟುಗಳು ಪತ್ತೆಯಾಗಿದ್ದವು. ಈ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳು ದೂರು ದಾಖಲಿಸಿದ್ದರು.