ಬೆಂಗಳೂರು, ಮೇ 30- ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿ ರೈತರು ಬಿಜೆಪಿ ಮುಖಂಡ ಗೋವಿಂದಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ವಿಧಾನಸಭೆ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸಾಲ ಮನ್ನಾ ವಿಷಯವಾಗಿ ರೈತ ಮುಖಂಡರ ಸಭೆ ಕರೆದಿದ್ದರು. ಇದಕ್ಕೆ ಬಿಜೆಪಿಯವರನ್ನು ಆಹ್ವಾನಿಸಲಾಗಿತ್ತು.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಅವರು ಭಾಗವಹಿಸದೆ ಉಪನಾಯಕ ಗೋವಿಂದ ಕಾರಜೋಳ ಅವರನ್ನು ಕಳುಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಅವರು, ಆಲಮಟ್ಟಿ ಅಣೆಕಟ್ಟು ಎತ್ತರ, ಹನಿ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಲಾರಂಭಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತ ನಾಯಕರು, ಇಲ್ಲಿ ಕೃಷಿ ಸಾಲ ಮನ್ನಾಕ್ಕೆ ಸಂಬಂಧಪಟ್ಟಂತೆ ಮಾತ್ರ ಮಾತನಾಡಬೇಕು ಎಂಬ ನಿಯಮ ಅನುಸರಿಸಲಾಗುತ್ತಿದೆ. ಈವರೆಗೂ ಮಾತನಾಡಿದ ಎಲ್ಲಾ ಮುಖಂಡರಿಗೂ ಅದೇ ಚೌಕಟ್ಟು ವಿಧಿಸಲಾಗಿದೆ. ತಾವೂ ಕೂಡ ಸಾಲ ಮನ್ನಾಕ್ಕೆ ಮಾತ್ರ ಸೀಮಿತವಾಗಿ ಮಾತನಾಡಿ. ಕೇಂದ್ರ ಸರ್ಕಾರದ ನಿಲುವೇನು ? ಬಿಜೆಪಿಯ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಡ ಹೇರಿದರು.
ಗೋವಿಂದ ಕಾರಜೋಳ ಅವರ ಮಾತು ಮುಂದುವರೆಸಲು ಯತ್ನಿಸಿದಾಗ ಅವಕಾಶ ಕೊಡದೆ ರೈತರು ಒಕ್ಕೊರಲಿನಿಂದ ಕೂಗಿ ಗದ್ದಲ ಎಬ್ಬಿಸಿದರು. ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಸಮಾಧಾನ ಪಡಿಸಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ.
ಗೋವಿಂದ ಕಾರಜೋಳ ಅವರು ಮೊದಲು ನನ್ನನ್ನು ಮಾತನಾಡಲು ಬಿಡಿ ಎಂದು ಎಷ್ಟೇ ಕೇಳಿದರೂ ರೈತ ನಾಯಕರು ಅದಕ್ಕೆ ಅವಕಾಶ ಕೊಡಲಿಲ್ಲ. ಕೊನೆಗೆ ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ 52 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದೆ. ಅದರಂತೆ 24 ಗಂಟೆಯೊಳಗಾಗಿ ಸಾಲ ಮನ್ನಾ ಮಾಡಬೇಕಿತ್ತು. ಈ ತಕ್ಷಣವಾದರೂ ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸಿ ಎಂದು ಹೇಳಿ ಮಾತು ಮುಗಿಸಿದರು.
ಅದಕ್ಕೂ ಮೊದಲು ನಾನು ರಾಜ್ಯ ಸರ್ಕಾರದ ಭಾಗವಾಗಿದ್ದೇನೆ. ಮುಖ್ಯಮಂತ್ರಿಯವರು ಕರೆದಿರುವ ಸಭೆಯಲ್ಲಿ ಮಾತನಾಡುತ್ತಿದ್ದೇನೆ. ಹಾಗಾಗಿ ರಾಜ್ಯದ ಮಟ್ಟಿಗೆ ಮಾತ್ರ ನನ್ನ ಅಭಿಪ್ರಾಯಗಳಿರುತ್ತವೆ. ಕೇಂದ್ರ ಸರ್ಕಾರ ಸಭೆ ಕರೆದರೆ ಅಲ್ಲಿ ನಮ್ಮ ಅಭಿಪ್ರಾಯಗಳಿರುತ್ತವೆ ಎಂದು ಹೇಳಿ ಕಾರೋಜೋಳ ಜಾರಿಕೊಂಡರು.