ಬೆಂಗಳೂರು, ಮೇ 29-ನಿನ್ನೆ ಅಪಘಾತದಲ್ಲಿ ಮೃತಪಟ್ಟ ಆಧುನಿಕ ಭಗೀರಥ, ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ಅಂತ್ಯಕ್ರಿಯೆ ಕುಟುಂಬವರ್ಗದವರ, ಅಪಾರ ಬೆಂಬಲಿಗರ ಶೋಕ ತರ್ಪಣದೊಂದಿಗೆ ಬಾಗಲಕೋಟೆ ಜಿಲ್ಲೆಯ ಹಿರೇಪಡಸಲಗಿ ಬಳಿಯ ಜಮಖಂಡಿ ಶುಗರ್ಸ್ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ವೀರಶೈವ ಲಿಂಗಾಯತ ಪದ್ಧತಿಯಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಾಸಕ ಸಿದ್ದು ನ್ಯಾಮಗೌಡ ಅವರ ಪಾರ್ಥೀವ ಶರೀರವನ್ನು ನಿನ್ನೆ 12ಕ್ಕೆ ಕಟ್ಟೆ ಕೆರೆ ಬಳಿ ತಾಲೂಕು ಆಡಳಿತದಿಂದ ಗೌರವ ಸಲ್ಲಿಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು, ಮುಖಂಡರು ಅಂತಿಮ ನಮನ ಸಲ್ಲಿಸಿದ ನಂತರ ಪಾರ್ಥೀವ ಶರೀರವನ್ನು ಮನೆಗೆ ತರಲಾಯಿತು. ಮನೆಯಲ್ಲಿ ಶ್ರೀಗಳಿಂದ ವಿಧಿವಿಧಾನ ಜರುಗಿದವು. ನಂತರ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು ಕ್ರೀಡಾಂಗಣದಿಂದ ಜಮಖಂಡಿ ಶುಗರ್ಸ್ ಆವರಣದವರೆಗೆ ಪಾರ್ಥೀವ ಶರೀರದ ಮೆರವಣಿಗೆ ಮಾಡಲಾಯಿತು.
ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಮೃತರ ಅಂತಿಮ ದರ್ಶನ ಪಡೆದರು. ಬೆಳಗ್ಗೆ ಅವರ ಹಿರಿಯ ಪುತ್ರ ಆನಂದನ್ ನ್ಯಾಮಗೌಡ ಅವರು ತಂದೆಯವರ ಅಂತಿಮ ಸಂಸ್ಕಾರ ನೆರವೇರಿಸಿದರು.
ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ವೀರಣ್ಣ ಚರಂತಿ ಮಠ್, ಮುರುಗೇಶ್ ನಿರಾಣಿ, ಟಿ.ಎಚ್.ಪೂಜಾರ್, ವೀರಪ್ಪ ರಾಥೋಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‍ಪಿ ಸೌದಾಗರ್, ಮಾಜಿ ಶಾಸಕ ಜಿ.ಟಿ.ಪಾಟೀಲ್, ಕಾಂಗ್ರೆಸ್ ಮುಖಂಡ ಸಿದ್ದಪ್ಪ ಚಡ್ಡಿ ಸೇರಿದಂತೆ ಮತ್ತಿತರ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಎರಡು ಬ್ಯಾರೇಜ್‍ಗಳನ್ನು ನಿರ್ಮಿಸಿ ಸುಮಾರು 64 ಹಳ್ಳಿಗಳಿಗೆ ನೀರು ಒದಗಿಸಲು ಕಾರಣಕರ್ತರಾದ, ರೈತಸಂಘದ ಮುಖಂಡರೂ ಆಗಿದ್ದ ಸಿದ್ದು ನ್ಯಾಮಗೌಡರ ಅಂತಿಮ ಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.
64 ಹಳ್ಳಿಗಳಲ್ಲದೆ, ಇತರೆ ಗ್ರಾಮಗಳಿಂದಲೂ ಜನ ಆಗಮಿಸಿ ಆಪತ್ಬಂಧಾನವ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು.