ಬೆಂಗಳೂರು, ಮೇ 29-ಸಚಿವ ಸಂಪುಟ ರಚನೆ ಹಾಗೂ ಸಮನ್ವಯ ಸಮಿತಿ ಸಭೆ ನಡೆಯುವ ಮುನ್ನವೇ ಹಿಂದಿನ ಅವಧಿಯಲ್ಲಿ ನೇಮಕವಾಗಿದ್ದ ನಿಗಮ ಮಂಡಳಿ ಅಧ್ಯಕ್ಷರನ್ನು ವಜಾಗೊಳಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ 13 ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಹಂತದಲ್ಲಿ ಸುಮಾರು 80 ಮಂದಿ ನಿಗಮ ಮಂಡಳಿ ಅಧ್ಯಕ್ಷರು ಮತ್ತು 20ಕ್ಕೂ ಹೆಚ್ಚು ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರನ್ನು ನೇಮಿಸಿದ್ದರು.
ಮುಂದಿನ ಆದೇಶದವರೆಗೂ ಅವರ ಅಧಿಕಾರಾವಧಿ ಮುಂದುವರೆಸಲಾಗಿದೆ ಎಂದು ನೇಮಕಾತಿ ಆದೇಶದಲ್ಲಿ ಸೂಚಿಸಲಾಗಿತ್ತು. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಆದೇಶ ಜಾರಿಯಾಗಿದ್ದು, ಹಿಂದಿನ ಅವಧಿಯಲ್ಲಿ ನೇಮಕವಾಗಿದ್ದ ನಿಗಮಮಂಡಳಿ ಅಧ್ಯಕ್ಷರು ಮತ್ತು ಸದಸ್ಯರನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಮೊದಲ ಕಂತಿನಲ್ಲಿ ಸುಮಾರು 70 ನಿಗಮ ಮಂಡಳಿಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿದ್ದರು. ಇದರಲ್ಲಿ ಅವರಿಗೆ 18 ತಿಂಗಳ ಅಧಿಕಾರಾವಧಿ ನೀಡಲಾಗಿತ್ತು. ಎರಡನೇ ಹಂತದ ನೇಮಕಾತಿ ವಿಳಂಬವಾದ ಹಿನ್ನೆಲೆಯಲ್ಲಿ ಮೊದಲು ನೇಮಕಾತಿಯಾದವರಿಗೆ ಮೂರು ತಿಂಗಳ ಹೆಚ್ಚುವರಿ ಅವಧಿ ಸಿಕ್ಕಿತ್ತು.
ಒಟ್ಟು 21 ತಿಂಗಳ ಅಧಿಕಾರಾವಧಿಯನ್ನು ಮೊದಲ ಹಂತದ ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರು ಅನುಭವಿಸಿದ್ದರು. ಎರಡನೇ ಹಂತದಲ್ಲಿ ಸುಮಾರು 80 ಮಂದಿ ನಿಗಮ ಮಂಡಳಿ ಅಧ್ಯಕ್ಷರಿಗೆ ನೇಮಕಾತಿ ಆದೇಶ ನೀಡಲಾಗಿತ್ತು. ಅವರಿಗೆ ಮುಂದಿನ ಆದೇಶದವರೆಗೂ ಮಾತ್ರ ಅಧಿಕಾರಾವಧಿ ಮುಗಿಯಲಿದೆ ಎಂದು ನಮೂದಿಸಲಾಗಿತ್ತು.
ಆದರೆ ಈ ಮೊದಲು ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ದಿಢೀರ್ ಆದೇಶ ಹೊರಡಿಸಿ ಹಿಂದನ ಸರ್ಕಾರದ ಎಲ್ಲಾ ನೇಮಕಾತಿಗಳನ್ನು ರದ್ದು ಮಾಡಿದ್ದರು. ಆದರೆ, ಅವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಇದ್ದುದ್ದರಿಂದ ಅವರ ಆದೇಶ ಊರ್ಜಿತಗೊಳ್ಳಲಿಲ್ಲ.
ಅನಂತರ ಜೆಡಿಎಸ್, ಕಾಂಗ್ರೆಸ್ನ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ,ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದರು. ಎರಡು ಪಕ್ಷಗಳಲ್ಲಿನ ಸಮನ್ವಯತೆಗೆ ಮತ್ತು ವಿವಿಧ ನೇಮಕಾತಿಗಳಿಗೆ ಸಂಬಂಧಪಟ್ಟಂತೆ ಸಮನ್ವಯ ಸಮಿತಿ ರಚಿಸಲಾಗಿದೆ. ಆ ಸಮಿತಿ ಇನ್ನೂ ಮೊದಲ ಹಂತದ ಸಭೆ ನಡೆಸಿಲ್ಲ. ಅದಕ್ಕೂ ಮೊದಲೇ ಹಿಂದಿನ ನೇಮಕಾತಿಗಳನ್ನೆಲ್ಲವನ್ನೂ ರದ್ದುಗೊಳಿಸಿರುವುದು ಕಾಂಗ್ರೆಸ್ನ ಅಸಮಾಧಾನಕ್ಕೆ ಕಾರಣವಾಗಿದೆ.
ಮೊದಲು ಸಮನ್ವಯ ಸಮಿತಿ ಸಭೆ ಸೇರಬೇಕು. ಅಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆಯಾಗಬೇಕು. ಎರಡು ಪಕ್ಷಗಳ ನಾಯಕರು, ಮುಖಂಡರು, ಶಾಸಕರಿಗೆ ಯಾವ ಯಾವ ಅಧಿಕಾರ ನೀಡಬೇಕು ಎಂಬ ಬಗ್ಗೆ ಸ್ಪಷ್ಟ ತೀರ್ಮಾನವಾದ ನಂತರ ಹಿಂದಿನ ಆದೇಶಗಳನ್ನು ರದ್ದು ಮಾಡಬಹುದಿತ್ತು. ಆದರೆ ಇದ್ಯಾವುದನ್ನೂ ಪರಿಗಣಿಸದೆ ಏಕಾಏಕಿಯಾಗಿ ಹಿಂದಿನ ಆದೇಶವನ್ನು ರದ್ದು ಮಾಡಿರುವುದು ಸರಿಯಲ್ಲ ಎಂಬ ಅಸಮಾಧಾನಗಳು ಕೇಳಿ ಬಂದಿವೆ.
ಈ ಬಗ್ಗೆ ಉಪಮುಖ್ಯಮಂತ್ರಿ ಪರಮೇಶ್ವರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರು ನೀಡಲಾಗಿದೆ. ಮುಂದಿನ ಅವಧಿಯ ಆದೇಶ ಜಾರಿಗೊಳ್ಳುವವರೆಗೂ ಹಿಂದಿನ ನೇಮಕಾತಿಯನ್ನು ಯಥಾವತ್ತಾಗಿ ಮುಂದುವರೆಸಬೇಕು ಎಂದು ಕೆಲವು ಕಾರ್ಯಕರ್ತರು ಒತ್ತಡ ಹೇರಿದ್ದಾರೆ. ಆದರೆ ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.