ಅಮಿತ್ ಶಾ ಹಾಗೂ ಕೇಂದ್ರ ಸಚಿವರ ಭೇಟಿಯು ಸಮನ್ವಯ ಸಭೆ ಅಲ್ಲ – ರಾಷ್ಟ್ರೀಯ ಸ್ವಯಂ ಸೇವಕ ಸಂಘ

ನವದೆಹಲಿ, ಮೇ 29-ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವರ ಭೇಟಿಯು ಸಮನ್ವಯ ಸಭೆ ಅಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್) ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಅಮಿತ್ ಶಾ ಹಾಗೂ ಕೇಂದ್ರದ ನಾಲ್ವರು ಸಚಿವರು ನಿನ್ನೆ ಆರ್‍ಎಸ್‍ಎಸ್ ನಾಯಕರನ್ನು ಭೇಟಿ ಮಾಡಿ ಕೇಂದ್ರ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ವಿವರಿಸಿದರು. ಅಲ್ಲದೇ ಬಹು ನಿರೀಕ್ಷಿತ ಶಿಕ್ಷಣ ನೀತಿ ಜಾರಿ ಬಗ್ಗೆಯೂ ಸಮಾಲೋಚಿಸಿದ್ದರು.
ಅಮಿತ್ ಶಾ ಮತ್ತು ಕೇಂದ್ರ ಸಚಿವರು ಆರ್‍ಎಸ್‍ಎಸ್ ನಾಯಕರನ್ನು ಭೇಟಿ ಮಾಡಿದ ಬೆನ್ನಲ್ಲೇ ಹಲವಾರು ಊಹಾಪೆÇೀಹಗಳು ಸೃಷ್ಟಿಯಾಗಿದ್ದವು.
ಇದಕ್ಕೆ ಸ್ಪಷ್ಟೀಕರಣ ನೀಡಿರುವ ಆರ್‍ಎಸ್‍ಎಸ್‍ನ ಅಖಿಲ ಭಾರತ ಪ್ರಚಾರ ಪ್ರಮುಖ ಅರುಣ್ ಕುಮಾರ್, ಈ ಭೇಟಿಯು ಸಮನ್ವಯ ಸಭೆಯಾಗಲಿ ಅಥವಾ ನಿರ್ಧಾರ ಕೈಗೊಳ್ಳುವ ಸಭೆಯಾಗಲಿ ಆಗಿರಲಿಲ್ಲ. ಪರಸ್ಪರ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಭೇಟಿಯಾಗಿತ್ತು ಅಷ್ಟೇ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಇದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‍ಎಸ್‍ಎಸ್‍ನ ವಿವಿಧ ಸಂಸ್ಥೆಗಳು ಆಗಾಗ ಮುಖಂಡರನ್ನು ಭೇಟಿ ಮಾಡಿ ತಮ್ಮ ಸಮಾಲೋಚನೆ ನಡೆಸುತ್ತವೆ. ಇದು ಸಾಮಾನ್ಯವಾದ ವಿಚಾರ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಆರ್‍ಎಸ್‍ಎಸ್‍ನಲ್ಲಿ ಸೇವಾ, ವೈಚಾರಕ್, ಆರ್ಥಿಕ್, ಶಿಕ್ಷಾ ಮತ್ತು ಸಾಮಾಜಿಕ್ ಎಂಬ ಗುಂಪುಗಳಿದ್ದು, ಈ ವಿಷಯಗಳ ಕುರಿತು ಅಗಾಗ ಸಭೆ ಸೇರಿ ಸಮಾಲೋಚನೆ ನಡೆಸುತ್ತವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ