ಜೋಹಾನ್ಸ್ಬರ್ಗ್, ಮೇ 29-ಕಾರು ಅಪಹರಣಕಾರ ಗುಂಡಿಗೆ ಭಾರತೀಯ ಮೂಲದ ಒಂಭತ್ತು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ದಕ್ಷಿಣ ಆಫ್ರಿಕಾದ ಚಾಟ್ಸ್ವರ್ಥ್ನಲ್ಲಿ ನಡೆದಿದೆ. ಈ ಘಟನೆಯಿಂದ ಭಾರತೀಯ ಸಮುದಾಯದವರು ಡರ್ಬನ್ ಸೇರಿದಂತೆ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಟ್ಸ್ವರ್ಥ್ನಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಾಡಿಯಾ ಸುಖ್ರಾಜ್ (9 ವರ್ಷ) ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಬಾಲಕಿ.
ತನ್ನ ತಂದೆ ಜೊತೆ ನಿನ್ನೆ ಕಾರಿನಲ್ಲಿ ಹೋಗುತ್ತಿದ್ದಾಗ ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದರು. ನಂತರ ತಂದೆಯನ್ನು ಕಾರಿನಿಂದ ಕೆಳಗಿಳಿಸಿ ಬಾಲಕಿಯನ್ನು ಅಪಹರಿಸಿದರು. ವಿಷಯ ತಿಳಿದು ಭಾರತೀಯ ಸಮುದಾಯದವರು ಆ ಕಾರನ್ನು ಬೆನ್ನಟ್ಟಿ ಗುಂಡಿನ ಚಕಮಕಿ ನಡೆಯಿತು. ನಂತರ ಕಾರು ಉದ್ಯಾನವನವೊಂದರಲ್ಲಿ ಪತ್ತೆಯಾಯಿತು. ಕಾರಿನಲ್ಲಿ ಅಪಹರಣಕಾರನೊಬ್ಬ ಗುಂಡೇಟಿನಿಂದ ಸತ್ತು ಬಿದ್ದಿದ್ಧ. ತೀವ್ರ ಗಾಯಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.
ಈ ಘಟನೆ ನಂತರ ಭಾರತೀಯ ಸಮುದಾಯದವರು ಡರ್ಬನ್ ಸೇರಿದಂತೆ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.