ತುಮಕೂರು, ಮೇ 28- ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಎರಡು ಜಾನುವಾರುಗಳು ಮೃತಪಟ್ಟಿದ್ದು , ಅಪ್ಪ-ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು , ಬೆಸ್ಕಾಂಗೆ ಸಾಕಷ್ಟು ನಷ್ಟ ಸಂಭವಿಸಿದೆ.
ಗುಬ್ಬಿ ತಾಲ್ಲೂಕಿನ ಚೇಳೂರು, ಸೋಮಲಾಪುರ, ಎಂ.ಎನ್‍ಕೋಟೆ, ಹೊಸಕೆರೆ, ರಂಗನಹಳ್ಳಿ , ಸಾತೇನಹಳ್ಳಿ ಗೇಟ್ ಸೇರಿದಂತೆ ಸುತ್ತಮುತ್ತಲು ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಚೇಳೂರಿನಲ್ಲಿ ಪರಮೇಶ್ವರಪ್ಪ ಎಂಬುವರ ಗುಡಿಸಲಿನ ಮೇಲೆ ಭಾರೀ ಮರ ಬಿದ್ದು ಎರಡು ಎಮ್ಮೆಗಳು ಸಾವನ್ನಪ್ಪಿವೆ. ಈ ವೇಳೆ ಗುಡಿಸಲಿನಲ್ಲಿದ್ದ ಪರಮೇಶ್ವರಪ್ಪ ಮತ್ತು ಮಗನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ದಾಸೇಗೌಡ ಎಂಬುವರಿಗೆ ಸೇರಿದ ತೆಂಗಿನ ಮರಗಳು ಬುಡ ಸಮೇತ ಧರೆಗುರುಳಿವೆ. ಇನ್ನು ಮಂಜುನಾಥ್ ಎಂಬುವರ ಮನೆಯ ಶೀಟ್‍ಗಳು ಹಾರಿ ಹೋಗಿವೆ. ಅಲ್ಲದೆ ಶಿರಾ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ಗಾಳಿಗೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಇದರಿಂದಾಗಿ ಹಲವಾರು ಗ್ರಾಮಗಳಲ್ಲಿ ರಾತ್ರಿಯಿಡೀ ವಿದ್ಯುತ್ ಕಡಿತಗೊಂಡಿದ್ದರಿಂದ ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯುವಂತಾಯಿತು. ಬೆಳಗ್ಗೆಯೇ ಬೆಸ್ಕಾಂ ಅಧಿಕಾರಿಗಳು, ನೌಕರರು ಸ್ಥಳಕ್ಕೆ ಧಾವಿಸಿ ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದು ಕಂಡು ಬಂತು.