ಬೆಂಗಳೂರು, ಮೇ 28-ಸಿದ್ದು ನ್ಯಾಮೇಗೌಡ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಇಂದು ದೆಹಲಿಯಿಂದ ಜಮಖಂಡಿಗೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಿದ್ದು ನ್ಯಾಮಗೌಡ ಅವರ ನಿಧನದಿಂದ ಜನಾನುರಾಗಿ, ಮೌಲ್ಯಾಧಾರಿತ ರಾಜಕಾರಣಿಯ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಸರ್ಕಾರದ ನೆರವಿಲ್ಲದೆ, ರೈತರಿಂದ ವಂತಿಗೆ ಸಂಗ್ರಹಿಸಿ ಕೃಷ್ಣಾ ನದಿಗೆ ಚಿಕ್ಕ ಪಡಸಲಗಿ ಬಳಿ ಬ್ಯಾರೇಜ್ ನಿರ್ಮಿಸಿದ್ದರು. ಅವರ ಜನಪರ ಕೆಲಸಗಳು ಸದಾ ಸ್ಮರಣೀಯ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಲಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಟ್ವೀಟರ್‍ನಲ್ಲಿ ಸಂತಾಪ ವ್ಯಕ್ತಪಡಿಸಿದ್ದು, ಬ್ಯಾರೇಜ್ ಸಿದ್ದು ಎಂದೇ ಹೆಸರಾಗಿದ್ದ ಸಿದ್ದು ನ್ಯಾಮಗೌಡರ ಅಕಾಲಿಕ ನಿಧನ ನನ್ನನ್ನು ದುಃಖತಪ್ತನನ್ನಾಗಿ ಮಾಡಿದೆ. ಜನ ಸದಾ ನೆನಪು ಮಾಡಿಕೊಳ್ಳುವ ಕೆಲಸವನ್ನು ಅವರು ಮಾಡಿ ಹೋಗಿದ್ದಾರೆ ಎಂದರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯಂಥವರನ್ನು ಸೋಲಿಸಿದ ಜನಾನುರಾಗಿ ಸಿದ್ದು ನ್ಯಾಮಗೌಡರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಸಂಪುಟ ವಿಸ್ತರಣೆ ಸಲುವಾಗಿ ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ಡಿ.ಕೆ.ಶಿವಕುಮಾರ್ ಮತ್ತಿತರರು ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿನ ಜಮಖಂಡಿಗೆ ತೆರಳಿ ಅಂತಿಮ ದರ್ಶನ ಪಡೆದು ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.